ಟ್ವಿಟರ್ ಗೆ ಪರ್ಯಾಯವಾಗಿ ಫೇಸ್‌ಬುಕ್ ಒಡೆತನದ ಮೆಟಾದ ಥ್ರೆಡ್ಸ್ ಆ್ಯಪ್
ಟ್ವಿಟರ್ ಗೆ ಪರ್ಯಾಯವಾಗಿ ಫೇಸ್‌ಬುಕ್ ಒಡೆತನದ ಮೆಟಾ ಕಂಪನಿ ಮೈಕ್ರೋ ಬ್ಲಾಗಿಂಗ್ ಆರಂಭಿಸಲು ಸಿದ್ದತೆ ನಡೆಸಿದ್ದು, ಈ ಹೊಸ ಆ್ಯಪ್ ಗೆ ಥ್ರೆಡ್ಸ್ ಎಂದ ಹೆಸರಿಡಲಾಗಿದೆ.
ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ ಕಳೆದ ವರ್ಷ ಟ್ವಿಟರ್ ಸಂಸ್ಥೆಯನ್ನು ಕೊಂಡುಕೊಂಡಿದ್ದರು. ಆ ಬಳಿಕ ಒಂದೊಂದೇ ಷರತ್ತನ್ನು ಬಳಕೆದಾರರ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದೀಗ ಈ ಎಲ್ಲಾ ಸಮಸ್ಯೆಗಳ ಲಾಭ ಪಡೆಯಲು ಮೆಟಾ ಪ್ರಯತ್ನಿಸುತ್ತಿದೆ.
ಥ್ರೆಡ್ಸ್ ಆ್ಯಪ್ ಟ್ವಿಟರ್ ಗೆ ಪರ್ಯಾಯವಾಗಲಿದ್ದು, ಅದರಂತೆ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಪೋಸ್ಟ್ ಓದಬಹುದು, ಲೈಕ್, ಕಮೆಂಟ್, ಶೇರ್ ಮಾಡಬಹುದು. ಜೊತೆಗೆ ಇತರ ಬಳಕೆದಾರರನ್ನು ಫಾಲೋ ಕೂಡ ಮಾಡಬಹುದು. ಇದೇ ಗುರುವಾರ (ಜು. 6) ಬಿಡುಗಡೆಯಾಗುವ ಸಾಧ್ಯತೆ ಇದೆ.
ಥ್ರೆಡ್ ಆ್ಯಪ್ ನಲ್ಲಿ ಟ್ವಿಟರ್ ನಂತೆಯೇ ಚರ್ಚೆ ನಡೆಸಲು ಅವಕಾಶವಿದೆ. ಡೌನ್ ಲೋಡ್ ಮಾಡಲು ಸದ್ಯದಲ್ಲೇ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದೆ. ಇತ್ತೀಚೆಗೆ ಮಸ್ಕ್ ಒಂದು ದಿನಕ್ಕೆ ಟ್ವಿಟರ್ ನಲ್ಲಿ ಇಂತಿಷ್ಟೆ ಪೋಸ್ಟ್ ಗಳನ್ನು ಓದಬಹುದು ಎಂದು ಮಿತಿ ಹೇರಿ ಬಳಿಕ ಹೆಚ್ಚಿಸಿದರು.
ಕಳೆದ ಶನಿವಾರ ವಿಶ್ವದಾದ್ಯಂತ ಕೆಲಕಾಲ ಟ್ವಿಟರ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದೆಲ್ಲ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿತ್ತು.