ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ (“Peedith” Hindi Cinema free show at Mangaluru)
ತುಳುವರು ನಿರ್ಮಿಸಿದ ಪೀಡಿತ್ ಹಿಂದಿ ಸಿನಿಮಾ ನೈಜತೆಗೆ ಕೈಗನ್ನಡಿ : ಡಾ. ಮೀನಾಕ್ಷಿ ರಾಮಚಂದ್ರ
(Mangaluru) ಮಂಗಳೂರು: ತುಳುನಾಡಿನ ಉತ್ಸಾಹಿ ಯುವಕರೇ ಸೇರಿಕೊಂಡು ನಿರ್ಮಿಸಿದ “ಪೀಡಿತ್” ಹಿಂದಿ ಸಿನಿಮಾವು ನಮ್ಮ ಸಮಾಜದಲ್ಲಿನ ನೈಜತೆಗೆ ಕೈಗನ್ನಡಿಯಾಗಿದೆ ಎಂದು ಕಲಾ ಸಂಘಟಕಿ, ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.
ಅವರು ಮಂಗಳೂರಿನ ಬಿಗ್ ಸಿನಿಮಾ ಮಾಲ್‌ನಲ್ಲಿ ಶ್ರೀ ಗುರುನಮನ ಸಂತೃಪ್ತಿ ತಂಡದಿಂದ ನಿರ್ಮಾಣಗೊಂಡಿರುವ “ಪೀಡಿತ್” ಹಿಂದಿ ಸಿನಿಮಾದ ವಿಶೇಷ ಉಚಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವಂತಹ ವಾತಾವರಣ ನಿರ್ಮಾಣ ಆಗಬೇಕು. ತಂತ್ರಜ್ಞತೆಗೆ ಹಾಗೂ ಅಭಿನಯಕ್ಕೆ ವಿಶೇಷ ಆಸ್ಪದ ನೀಡಿರುವ ಈ ಸಿನಿಮಾವು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳಿಸುವಂತಾಗಲಿ. ತುಳು ಚಿತ್ರರಂಗದ ಮೂಲಕ ಹಿಂದಿ ಭಾಷೆಯಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವ ಕೆಲಸ ನಡೆಯಲಿ ಎಂದೂ ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಅಧ್ಯಕ್ಷತೆಯನ್ನು ವಹಿಸಿ, ತುಳುನಾಡಿನ ಪ್ರತಿಭಾವಂತರು ಸೇರಿಕೊಂಡು ಮಾಡಿರುವ ಈ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಿ ವಿಮರ್ಶಿಸಿ ಗೆಲ್ಲಿಸುವ ಎಲ್ಲಾ ಲಕ್ಷಣಗಳು ಇದೆ. ಒಂದು ವ್ಯವಸ್ಥಿತ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವುದನ್ನು ಚಿತ್ರ ಸಮಾಜಕ್ಕೆ ಪಾಠವಾಗುತ್ತದೆ ಎಂದು ಹೇಳಿದರು.
ತುಳು ಸಿನಿಮಾ ರಾಜ್ ಸೌಂಡ್ಸ್ ಎಂಡ್ ಲೈಟ್ಸ್‌ನ ನಿರ್ಮಾಪಕ ಆನಂದ ಎನ್. ಬಂಟ್ವಾಳ ಶುಭ ಹಾರೈಸಿದರು.
ಮನಪಾದ ಮಾಜಿ ಸದಸ್ಯ ಪ್ರಶಾಂತ್ ಆಳ್ವಾ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಕಾರ್ಯಕ್ರಮ ನಿರೂಪಕಿ ಡಾ. ಪ್ರಿಯಾ ಹರೀಶ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಚೇತಕ್ ಪೂಜಾರಿ ಮತ್ತು ಸಂತೋಷ್ ಅಂಚನ್ ಕಾರ್ಕಳ, ಮುಂಬೈಯ ಉದ್ಯಮಿ ಸತ್ಯಶಂಕರ್ ನಾಯ್ಕ್, ಕಲಾ ವಿಮರ್ಷಕ ನಾಗರಾಜ ಸುವರ್ಣ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಶೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಸಹಕಾರಿ ಸಂಘದ ಮೂಲ್ಕಿ ವಲಯದ ನಿರ್ದೇಶಕ ಮೋಹನ್ ಭಟ್ ಹಳೆಯಂಗಡಿ, ಕಲಾ ಪೋಷಕ ತಾರಾನಾಥ ಕೋಟ್ಯಾನ್ ಫಲಿಮಾರು, ಚಿತ್ರದ ಸಹ ನಿರ್ಮಾಪಕ ಸುರೇಶ್ ಬಟ್ಟೆಕಲ್ ವರ್ಕಾಡಿ, ಸಮಾಜ ಸೇವಕ ಧರ್ಮಾನಂದ ಶೆಟ್ಟಿಗಾರ್ ತೋಕೂರು ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ನಿರ್ದೇಶಕ ದೇವಿಪ್ರಕಾಶ್ ಸ್ವಾಗತಿಸಿದರು. ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ವಂದಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
“ಪೀಡಿತ್” ಸಿನಿಮಾ : ಬಡ ಸುಶಿಕ್ಷಿತ ಕುಟುಂಬದ ಅಮಾಯಕ ಯುವಕನೋರ್ವ ಸಮಾಜದ ವ್ಯವಸ್ಥಿತ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಹೊರ ಬರಲಾರದ ತುಡಿತದ ಚಿತ್ರಣವೇ ಸಿನಿಮಾದ ಕಥಾಂಶವಾಗಿದೆ. ಕೊನೆಯ ಕ್ಷಣದವರೆಗೂ ಚಿತ್ರದ ರೋಚಕ ತಿರುವುಗಳು ಕಾಣುತ್ತಾ ಕ್ಲೈಮಾಕ್ಸ್ ಹಂತದಲ್ಲಿಯೂ ಕುತೂಹಲ ಕೆರಳಿಸುವ ಚಿತ್ರ ಕಥೆ ಹಾಗೂ ಮುಖ್ಯ ಪಾತ್ರದೊಂದಿಗೆ ನಿರ್ದೇಶನವನ್ನು ದೇವಿಪ್ರಕಾಶ್ ಮಾಡಿದ್ದಾರೆ. ಕ್ಯಾಮಾರಾ ಕೈಚಳಕದಲ್ಲಿ ಹರೀಶ್ ಪಿ. ಕೋಟ್ಯಾನ್ ಪಡು ಪಣಂಬೂರು, ಸಂಗೀತ, ಸಂಕಲನ, ಮಿಕ್ಸಿಂಗ್ ಕೆಲಸವನ್ನು ದೇವ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಮಾಡಿದೆ. ಬೊಳ್ಳಿಬೆಟ್ಟು ಶೇಖರ್ ಶೆಟ್ಟಿ ಗುರುಪುರ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸುರೇಶ್ ಬಟ್ಟೆಕಲ್ ವರ್ಕಾಡಿ ಅವರು ಪಾತ್ರವೊಂದರಲ್ಲಿಯೂ ಅಭಿನಯಿಸಿದ್ದಾರೆ.
ಪ್ರಮುಖ ಪಾತ್ರದಲ್ಲಿ ನರೇಂದ್ರ ಕೆರೆಕಾಡು, ಪೂಜಾ ಶಕ್ತಿನಗರ, ಧರ್ಮಾನಂದ ಶೆಟ್ಟಿಗಾರ್ ತೋಕೂರು, ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಡಿ.ಕೆ. ಆಚಾರ್ಯ ಕುಂಬಳೆ, ವಿನೋದ್ ಸಂತೆಕಟ್ಟೆ, ದೀಪಕ್, ಶ್ರಾವಣ್ ಎಸ್. ದೇವಾಡಿಗ, ಧೀರಜ್ ಡಿ. ಆಚಾರ್ಯ, ತೇಜಾಕ್ಷಿ ಮೆಂಡನ್ ಸಸಿಹಿತ್ಲು, ಡಿಜೆ ಅವಿನಾಶ್, ಸುನಿಲ್, ಆದರ್ಶ, ಅಶ್ವಿನಿ ಬಳ್ಳಾರಿ ಅಭಿನಯಿಸಿದ್ದಾರೆ.