ದ.ಕ :ಟಿಕೆಟ್ ತಮಗೇ ಸಿಗುವ ವಿಶ್ವಾಸ: ಪದ್ಮರಾಜ್ (DK : Confident of getting the ticket : Padmaraj)
ದ.ಕ :ಟಿಕೆಟ್ ತಮಗೇ ಸಿಗುವ ವಿಶ್ವಾಸ: ಪದ್ಮರಾಜ್
(Mangaluru) ಮಂಗಳೂರು : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬುಧವಾರ ಸಂಜೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇದರ ಮಧ್ಯೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪದ್ಮರಾಜ್ ಟಿಕೆಟ್ ತಮಗೇ ಸಿಗುವ ವಿಶ್ವಾಸ ಹೊಂದಿದ್ದಾರೆ.
ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ (EX Minister Janardhana Poojary) ಅವರ ಶಿಷ್ಯ. ವಕೀಲರು ಆಗಿರುವ ಪದ್ಮರಾಜ್ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿಯಾಗಿಯೂ ಕಳೆದ ಹಲವು ಸಮಯಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪದ್ಮರಾಜ್ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು.
ಆ ಸಂದರ್ಭದಲ್ಲಿ ಪದ್ಮರಾಜ್ ಅವರಿಗೆ ಲೋಕಸಭಾ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಪದ್ಮರಾಜ್ ಅವರು ಇದೀಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಖಾತ್ರಿಯಾಗಿದೆ.
ಪದ್ಮರಾಜ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರಬಲ ಸಮುದಾಯವಾದ ಬಿಲ್ಲವ ಸಮುದಾಯದವರಾಗಿದ್ದಾರೆ. ಈಗಾಗಲೇ ಟಿಕೆಟ್ ಕನ್ಫರ್ಮ್ ಆಗಿರುವುದರಿಂದ ಬೆಳಗ್ಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆ ಬಳಿಕ ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ, ಆಶೀರ್ವಾದ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದೇನೆ. ಆದರೆ, ರಾಷ್ಟ್ರೀಯ ಪಕ್ಷದಲ್ಲಿ ಅದರದ್ದೇ ಆದ ರೀತಿ ನೀತಿಗಳಿವೆ. ಆದರೆ, ಖಂಡಿತವಾಗಲೂ ಜನರ ಭಾವನೆಗಳಿಗೆ ಬೆಲೆಕೊಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಆದ್ದರಿಂದ ತನಗೆ ಟಿಕೆಟ್ ದೊರಕುತ್ತದೆ ಎಂಬ ಧೈರ್ಯ ನನಗಿದೆ ಎಂದು ಹೇಳಿದರು.