ಪಡುಬಿದ್ರಿಯಲ್ಲಿ ತಡರಾತ್ರಿ ಗ್ಯಾಂಗ್ ವಾರ್ ವರದಿ
ಮಾರಕಾಯುಧಗಳಿಂದ ಕೊಲೆಗೆ ಯತ್ನ; ಅಕ್ರಮ ಮರಳುಗಾರಿಕೆಯ ವೈಷಮ್ಯದ ಶಂಕೆ
ಪಡುಬಿದ್ರಿ: ಗುಂಪು ವೈಷಮ್ಯದ ಹಿನ್ನಲೆಯಲ್ಲಿ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ ಘಟನೆ ಗುರುವಾರ ತಡರಾತ್ರಿ ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ಇರುವ ಸರ್ವಿಸ್ ರಸ್ತೆಯ ರಾಯಲ್ ಶವರ್ಮಾ ಬಳಿ ನಡೆದಿದೆ
ಘಟನೆಯ ವಿವರ:
ಸಹೋದರರಾದ ಸುಜಿತ್ ಹಾಗೂ ಅಜಿತ್ ತಮ್ಮ ಸ್ನೇಹಿತ ಕರಣ್ ಜೊತೆ ತಡರಾತ್ರಿ ಸರ್ವಿಸ್ ರಸ್ತೆಯಲ್ಲಿರುವ ಪ್ರಣವ್ ಎಂಬಾತನ ಹೋಟೆಲ್ ಗೆ ಬಂದಿದ್ದು, ಈ ಸಂದರ್ಭ ಆರೋಪಿಗಳಾದ ಸೂರಜ್, ತನುಜ್ ಮತ್ತು ಶರತ್ ಇನೋವ ಕಾರಿನಲ್ಲಿ ಬಂದು ಕಾರು ನಿಲ್ಲಿಸಿ ಸುಜಿತ್ ಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ , ಹಲ್ಲೆ ಮಾಡಿ ಜೀವ ಬೆದರಿಕೆ ನೀಡಿದ್ದಾರೆ. ಈ ಸಂದರ್ಭ ಎರಡೂ ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು, ಬೈಕಿನಲ್ಲಿ ಸ್ಥಳಕ್ಕೆ ಆಗಮಿಸಿದ ಮತ್ತೋರ್ವ ಆರೋಪಿ ಅನ್ವಿಶ್ ಏಕಾಏಕಿ ಹಲ್ಲೆ ನಡೆಸಿ ಜೀವ ಬೆದರಿಕೆ ನೀಡುತ್ತಿದ್ದಂತೆ ಸೂರಜ್ ಕತ್ತಿಯಿಂದ ಹಾಗೂ ಶರತ್ ಡ್ರಾಗನ್ ನಿಂದ ಹಲ್ಲೆ ನಡೆಸಾಲು ಮುಂದಾಗಿದ್ದಾರೆ. ಡ್ರಾಗನ್ ನಿಂದ ಎದೆಗೆ ಚುಚ್ಚಲು ಯತ್ನಿಸಿದಾಗ ಸುಜಿತ್ ತನ್ನ ಕೈಯಿಂದ ತಡೆದಿದ್ದರಿಂದ ಕೈಗೆ ಗಾಯವಾಗಿದೆ. ಅಪಾಯದ ಅರಿವಾಗಿ ಸುಜಿತ್ ಅಲ್ಲಿಂದ ಓಡಿದಾಗ ಸೂರಜ್ ಹಾಗೂ ಶರತ್ ಅಟ್ಟಿಸಿಕೊಂಡು ಹೋಗಿದ್ದು, ಅವರನ್ನು ತಡೆಯಲು ಹೋದ ಅಜಿತ್ ಗೂ ಕತ್ತಿ ಬೀಸಿದ ಆರೋಪಿಗಳು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಅಕ್ರಮ ಮರಳುಗಾರಿಕೆ ಪ್ರೇರಿತ ವೈಷಮ್ಯ?
ಎರಡೂ ಗುಂಪುಗಳ ಮಧ್ಯೆ ಅವೆಷ್ಟೋ ಸಮಯದಿಂದ ಅಕ್ರಮ ಮರಳುಗಾರಿಕೆಗೆ ಸಂಬಂಧಪಟ್ಟಂತೆ ತಕರಾರು ಇತ್ತು ಎಂದು ಹೇಳಲಾಗುತ್ತಿದೆ. ಎರಡೂ ತಂಡಗಳು ಮರಳು ಧಕ್ಕೆ ನಡೆಸುತ್ತಿದ್ದು ಮರಳುಗಾರಿಕೆಯ ಬಗ್ಗೆ ಬಹಳಷ್ಟು ಬಾರಿ ಈರ್ವರ ಮಧ್ಯೆ ವೈಷಮ್ಯ ಬೆಳೆದಿತ್ತಂತೆ. ಮುಸುಕಿನ ಗುದ್ದಾಟದಂತೆ ನಡೆಯುತ್ತಿದ್ದ ಸಂಘರ್ಷ ಬೀದಿ ಕಾಳಗಕ್ಕೆ ತಲುಪಿದ್ದು ಪೊಲೀಸ್ ಇಲಾಖೆ ತಕ್ಕ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯ ಗ್ಯಾಂಗ್ ವಾರ್ ರಾಜಧಾನಿ?:
ಗುಂಪುಗಾರಿಕೆಯ ಪುಂಡಾಟಿಕೆಗೆ ಕುಖ್ಯಾತವಾಗಿರುವ ಪಡುಬಿದ್ರಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್ ಪ್ರಕರಣ ನಡೆದಿದ್ದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿದೆ. ಅವೆಷ್ಟೋ ವರುಷಗಳಿಂದ ಗುಂಪು ಗಲಾಟೆಗಳ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ಪಡುಬಿದ್ರಿಯಲ್ಲಿ ಘಟಿಸುತ್ತಲೇ ಇತ್ತು. ಬಹುತೇಕ ಪ್ರಕರಣಗಳು ಗುಂಪುಗಳ ಮಧ್ಯದ ಸಾಮಾನ್ಯ ಭಿನ್ನಾಭಿಪ್ರಾಯದ ಕಾರಣ, ಯಾವುದೋ ಜಾತ್ರೆಗಳಲ್ಲಿ ಮದ್ಯದ ಪ್ರಭಾವದಿಂದ ನಡೆಯುತ್ತಿದ್ದವುಗಳು. ಆದರೆ ಇತ್ತೀಚಿಗೆ ಗುಂಪು ಗಲಾಟೆಗಳ ಸ್ವರೂಪ ಬದಲಾಗಿದೆ. ದೋಸ್ತಿಗಾರಿಕೆ ಯಲ್ಲಿದ್ದ ಗುಂಪುಗಳು ಕೆಟ್ಟ ಸನ್ನಿವೇಶಗಳಿಂದ ಗಲಾಟೆಯ ಗೋಜಲಿಗೆ ಇಳಿಯುತ್ತಿದ್ದು, ಇತ್ತೀಚಿಗೆ ವ್ಯವಹಾರಿಕ ವೈಷಮ್ಯ, ವೃತ್ತಿಪರ ಅಪರಾಧಗಳ ಗುಂಪುಗಳಾಗಿ ಮಾರ್ಪಾಡುಗೊಳ್ಳುತ್ತಿದ್ದಂತಿದೆ.