ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ “ತುಳುವೆರೆ ಬದ್‌ಕ್” ಕಾರ್ಯಕ್ರಮ (“Tuluvere Baduku” Proagram at Padubidri Sri Narayana Guru Hall)
ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ “ತುಳುವೆರೆ ಬದ್‌ಕ್” ಕಾರ್ಯಕ್ರಮ
(Padubidri) ಪಡುಬಿದ್ರಿ : ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕ ಇದರ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 96ನೇ ಪುಣ್ಯ ತಿಥಿಯ ಪ್ರಯುಕ್ತ ತುಳುವೆರೆ ಬದ್‌ಕ್ (ಕೂಡುಕಟ್ಟ್ – ಕಟ್ಟ್ ಪಾಡ್) ಕಾರ್ಯಕ್ರಮದ ಸಮನ್ವಯಕಾರರಾಗಿ ಮೂಡಬಿದ್ರಿ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ|ಯೋಗೀಶ್ ಕೈರೋಡಿ ಭಾಗವಹಿಸಿದ್ದರು.
ಅವರು ಮಾತನಾಡಿ, ಕಟ್ಟುಪಾಡು ಆಯಾಯ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ತುಳು ಸಂಸ್ಕೃತಿ ಬಹು ಸಂಸ್ಕೃತಿ. ತುಳುವರಿಗೆ ಭಾಷೆ ಮತ್ತು ಸಂಸ್ಕೃತಿ ಅಭಿಮಾನವಿದೆ. ಹಿಂದೆ ಕೀಳರಿಮೆಯಿತ್ತು. ಇಂದು ತುಳುವಿನ ಬಗ್ಗೆ ಅಭಿಮಾನವಿದೆ. ಪ್ರಾಯೋಗಿಕವಾಗಿ ಮಾಡಲಾಗದ್ದನ್ನು ಚಿಂತಿಸಬಾರದು. ಸಾಂಸ್ಕೃತಿಕ ಸಂಘರ್ಷದಲ್ಲಿ ನಾವಿದ್ದೇವೆ. ಕೂಡುಕಟ್ಟು ಸಮಾಜವನ್ನು ಅವಮಾನಿಸುವಂತಿರಬಾರದು. ಬದಲಾವಣೆಗೆ ಒಗ್ಗಿ ಮೂಲ ಸ್ವರೂಪದಲ್ಲಿ ಅಳವಡಿಸಲಾಗದಿದ್ದರೂ, ಪಾಲಿಸೋಣ ಎಂದು ಡಾ|ಯೋಗೀಶ್ ಕೈರೋಡಿ ಹೇಳಿದರು.
ಯುವ ಚಿಂತಕ ಸಂತೋಷ್ ನಂಬಿಯಾರ್ ವಿಚಾರ ಮಂಡಿಸಿ, 16 ವರ್ಗದವರು ಸೇರಿದಾಗ ದೈವಾರಾಧನೆ ಪರಿಪೂರ್ಣ. ತುಳುನಾಡಿನ ದೈವಾರಾಧನೆಯು ಜಾತಿ, ಮತ, ಧರ್ಮ ಮೀರಿದವು. ಆರಾಧನೆ ಬದುಕಿನ ನಡುವೆ ಕೂಡುಕಟ್ಟು ಬಹುಮುಖ್ಯ. ಹುಟ್ಟು ಸಾವಿನವರೆಗೂ ಇದು ಅನಿವಾರ್ಯವಾಗಿದೆ ಎಂದರು.
ಜಾನಪದ ಚಿಂತಕ ಜಯ ಎಸ್ ಶೆಟ್ಟಿ ಪದ್ರ ವಿಚಾರ ಮಂಡಿಸಿ, ಕೃಷಿ ಬದುಕಿನ ಅನಾವರಣ ದ್ರಾವಿಡ ಮೂಲದ ತುಳುವರ ಬದುಕು ಕೃಷಿ ಆಧಾರಿತವಾಗಿತ್ತು. ಕೃಷಿ ಹಿಂದುಳಿಯಲು ಕೌಟುಂಬಿಕತೆಯೇ ಕಾರಣ. ಮೊಗವೀರ, ಬಿಲ್ಲವರು ಮತ್ತು ಬಂಟರು ಸಹೋದರರಂತೆ ಬದುಕಿನಲ್ಲಿ ದೈವತ್ವ ಕಂಡವರು. ಈ ಮೂರೂ ವರ್ಗ ಒಬ್ಬರಿಗೊಬ್ಬರು ಈಗಲೂ ಸಹಾಯ ಮಾಡುತ್ತಿರುವುದು ಕಂಡು ಬರುತ್ತಿದೆ. ಹಳೆ ಪದ್ಧತಿಗಳನ್ನು ಮೊದಲಿಗೆ ನಾವು ನಮ್ಮ ಮನೆ ಮಕ್ಕಳಿಗೆ ತಿಳಿ ಹೇಳಬೇಕಿದೆ ಎಂದರು.
ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಉದ್ಘಾಟಿಸಿದರು.
ಈ ಸಂದರ್ಭ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ವಿಷಯದಲ್ಲಿ 6ನೇ ರ‍್ಯಾಂಕ್ ಗಳಿಸಿದ ಡಾ. ಐಶ್ವರ್ಯ ಸಿ ಅಂಚನ್ ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ವಹಿಸಿದ್ದರು.
ಈ ಸಂದರ್ಭ ಪಡುಬಿದ್ರಿ ಯುವವಾಹಿನಿ ಘಟಕದ ಅಧ್ಯಕ್ಷೆ ಶಶಿಕಲಾ ಯಶೋಧರ್, ನಾರಾಯಣ ಗುರು ಮಂದಿರದ ಪ್ರಧಾನ ಅರ್ಚಕ ಚಂದ್ರಶೇಖರ ಶಾಂತಿ, ಪಡುಬಿದ್ರಿ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಭಾಸ್ಕರ್ ಎನ್ ಅಂಚನ್, ಬಿಲ್ಲವ ಸಂಘದ ಕಾರ್ಯದರ್ಶಿ ಲಕ್ಷ್ಮಣ ಡಿ ಪೂಜಾರಿ, ಯುವವಾಹಿನಿ ಘಟಕದ ಕಾರ್ಯದರ್ಶಿ ಸುಜಾತ ಪ್ರಸಾದ್ ಉಪಸ್ಥಿತರಿದ್ದರು.
ಸುಜಿತ್ ಪೂಜಾರಿ ಪ್ರಸ್ತಾವನೆಗೈದರು. ರವಿರಾಜ್ ಕೋಟ್ಯಾನ್ ಮತ್ತು ಡಾ. ಐಶ್ವರ್ಯ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್ ಎನ್ ಅಂಚನ್ ವಂದಿಸಿದರು.
ನಾರಾಯಣಗುರು ಮಂದಿರದಲ್ಲಿ ಭಜನಾ ಸೇವೆ ಮತ್ತು ವಿಶೇಷ ಪೂಜೆ ಜರಗಿತು.