ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತನಿಖೆಗೆ ರಾಜ್ಯ ಸರಕಾರ ಆದೇಶ (Prajwala Revanna Obscean vedio: State Govt Order SIT Investigation)
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತನಿಖೆಗೆ ರಾಜ್ಯ ಸರಕಾರ ಆದೇಶ
(Bengaluru)ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ಪ್ರಜ್ವಲ್ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣವನ್ನು ರಾಜ್ಯ ಸರಕಾರ ಎಸ್ಐಟಿ ತನಿಖೆಗೆ ವಹಿಸಲು ಆದೇಶ ಹೊರಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramayya) ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದು, ಪ್ರಜ್ವಲ್ ರೇವಣ್ಣ (MP Prajwal Revanna) ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ನೂರಾರು ಅಶ್ಲೀಲ ವಿಡಿಯೋಗಳು, ಚಿತ್ರಗಳು ವೈರಲ್ ಆಗಿದೆ. ಇದರ ಬೆನ್ನಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದೀಗ ರಾಜ್ಯ ಸರಕಾರ ಎಸ್‌ಐಟಿಗೆ ವಹಿಸಿ ಆದೇಶವನ್ನು ಹೊರಡಿಸಿದೆ.
ಪೆನ್ ಡ್ರೈವ್ ಲೈಂಗಿಕ ಹಗರಣದ ರೂವಾರಿ ಸೇರಿದಂತೆ, ಇದರಲ್ಲಿ ಪಾಲ್ಗೊಂಡವರನ್ನು ಬಂಧಿಸಿ ತನಿಖೆ ನಡೆಸಲು ಒತ್ತಾಯಿಸಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏ.29ರಂದು ಪ್ರತಿಭಟನೆ ಮಾಡುವುದಾಗಿ ಘೋಷಿಸಿದೆ.
ಅಶ್ಲೀಲ ವಿಡಿಯೋಗಳ ವೈರಲ್‌ನಿಂದ ಜೆಡಿಎಸ್‌ನಲ್ಲಿ ಬಿರುಗಾಳಿ ಬೀಸುವ ಜೊತೆಗೆ ಮೈತ್ರಿ ಬಿಜೆಪಿಗೂ ದೊಡ್ಡ ಮಟ್ಟದಲ್ಲಿ ಇರಿಸು-ಮುರಿಸು ಉಂಟು ಮಾಡಿದೆ.
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸಿರುವ ಹಾಸನ ಸೇರಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆದಿತ್ತು. ಪ್ರತಿ ಚುನಾವಣೆಯಲ್ಲೂ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸುತ್ತಿದ್ದ ಪ್ರಜ್ವಲ್, ಈ ಬಾರಿ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯಲ್ಲಿ ಏಕಾಂಗಿಯಾಗಿ ಬಂದು ಮತ ಚಲಾವಣೆ ಮಾಡಿದ್ದರು.
ಶನಿವಾರ ಮುಂಜಾನೆ ಮೂರು ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ನಿಂದ ಉಚ್ಛಾಟನೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತೀರ್ಮಾನಿಸಿದ್ದಾರೆ. ಮಂಗಳವಾರ ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಆ ಬಗ್ಗೆ ಅಧಿಕೃತ ಅದೇಶ ಹೊರಡಿಸಲಾಗುವುದು ಎಂದು ಎಂದು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಜ್ವಲ್ ಅವರ ಉಚ್ಚಾಟನೆಯ ಬಗ್ಗೆ ಭಾನುವಾರ ರಾತ್ರಿಯೇ ದೇವೇಗೌಡರ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದರು.