ಬೆಳ್ತಂಗಡಿ: ಐ ಬಿ ಕಾಮಗಾರಿಯಲ್ಲಿ ಅವ್ಯವಹಾರ : ತನಿಖೆಗೆ ಕಾಂಗ್ರೆಸ್ ಒತ್ತಾಯ (Belthangadi : Malpractice in IB work, Congress insits on investigation)
ಬೆಳ್ತಂಗಡಿ: ಐ ಬಿ ಕಾಮಗಾರಿಯಲ್ಲಿ ಅವ್ಯವಹಾರ : ತನಿಖೆಗೆ ಕಾಂಗ್ರೆಸ್ ಒತ್ತಾಯ
(Belthangadi) ಬೆಳ್ತಂಗಡಿ; ಬೆಳ್ತಂಗಡಿಯಲ್ಲಿ ನಡೆದಿದ್ದ ಐಬಿ ಕಾಮಗಾರಿಯಲ್ಲಿ ಕೋಟ್ಯಾಂತರ ರುಪಾಯಿ ಅವ್ಯವಹಾರವಾಗಿದ್ದು ಈ ಬಗ್ಗೆ ಸರಕಾರ ಎಸ್.ಐ.ಟಿ ತನಿಖೆ ನಡೆಸಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಬಿ ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ಕೋಟಿ ರೂ ಹೆಚ್ಚುವರಿ ಅನುದಾನವನ್ನು ಮಂಜೂರು ಗೊಳಿಸಲಾಗಿದೆ. ಯಾವುದೇ ರೀತಿಯಲ್ಲಿ ಕಾನೂನನ್ನು ಪಾಲಿಸದೆ, ಈ ಅನುದಾನವನ್ನು ಮಂಜೂರು ಗೊಳಿಸಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದರು.
ಐ ಬಿ ಕಾಮಗಾರಿಯ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೂ ದೂರು ನೀಡಲಾಗಿದೆ. ಇಲ್ಲಿ ತನಿಖೆ ನಡೆಯದಂತೆ ಒತ್ತಡ ಹೇರುವ ಪ್ರಕ್ರಿಯೆ ಕೆಲವರಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದ ಅವರು, ಬೆಳ್ತಂಗಡಿಯ ಕೆಲವರು ಈ ತನಿಖೆ ನಡೆಯದಂತೆ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಹೆಸರನ್ನು ಬಹಿರಂಗ ಗೊಳಿಸುವುದಾಗಿ ತಿಳಿಸಿದರು.
ಅವ್ಯವಹಾರದ ಬಗ್ಗೆ ಧ್ವನಿಯೆತ್ತಿದ ಕಾರಣಕ್ಕಾಗಿ ಜೀವ ಬೆದರಿಕೆ ಹಾಕುವ ಕಾರ್ಯ ನಡೆಯುತ್ತಿದೆ. ಆದರೆ ಅಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಈ ಪ್ರಕರಣದಲ್ಲಿ ತನಿಖೆ ನಡೆದು ಸತ್ಯ ಹೊರ ಬರುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ಐಬಿ ಗುತ್ತಿಗೆ ಪಡೆದಿದ್ದ ಹಾಗೂ ತಾಲೂಕಿನಲ್ಲಿ ಕಳೆದ ಅವಧಿಯಲ್ಲಿ ಬಹಳಷ್ಟು ಕಾಮಗಾರಿಗಳನ್ನು ಮಾಡಿದ್ದ ಬಿಮಲ್ ಕಂಪೆನಿಯ ಬಗ್ಗೆಯೂ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ ರಕ್ಷಿತತ್ ಶಿವರಾಮ್, ಈ ಕಂಪೆನಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳಿಂದ ಬಹಿರಂಗಗೊಂಡಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹೆದ್ದಾರಿ ಗುತ್ತಿಗೆದಾರರಿಂದ ಕಿಕ್ ಬ್ಯಾಕ್
ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರಿಂದ ಶಾಸಕರು ಚುನಾವಣೆ ಸಂದರ್ಭದಲ್ಲಿ ಮೂರು ಕೋಟಿ ಹಣ ಪಡೆದಿದ್ದಾರೆ ಎಂದು ನೇರವಾಗಿ ಆರೋಪಿಸಿದ ರಕ್ಷಿತ್ ಶಿವರಾಂ, ಈಗ ಬಿಮಲ್ ಕಂಪೆನಿಯವರು ಬೆಳ್ತಂಗಡಿಯಿಂದ ಕಾಲು ಕಿತ್ತಿದ್ದಾರೆ. ಇವರೂ ಓಡಿ ಹೋಗುವ ದಿನ ದೂರವಿಲ್ಲ ಎನಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.