ಮುಂಬಯಿ ತಂಡದಲ್ಲಿ ಮಿಂಚಿದ ಉಡುಪಿ ಕ್ರಿಕೆಟಿಗ (Udupi Criketer who shined Mumbai Team)
ಮುಂಬಯಿ ತಂಡದಲ್ಲಿ ಮಿಂಚಿದ ಉಡುಪಿ ಕ್ರಿಕೆಟಿಗ
(Udupi) ಉಡುಪಿ; ಉಡುಪಿ ಜಿಲ್ಲೆಯ ಪಾಂಗಾಳ ಮೂಲದ, ಪ್ರಸ್ತುತ ಮುಂಬಯಿ ರಣಜಿ ತಂಡದ ಆಲ್‌ರೌಂಡರ್ ಆಗಿ ಮಿಂಚುತ್ತಿರುವ ತನುಷ್ ಕೋಟ್ಯಾನ್ (Cricketer Thanush Kotian) ಅವರ ಸಾಧನೆ ಕಂಡು ತುಳುನಾಡು ಮತ್ತು ಕರಾವಳಿ ಕರ್ನಾಟಕದ ಮುಂಬಯಿಗರೆಲ್ಲರೂ ಹೆಮ್ಮೆಪಟ್ಟಿದ್ದಾರೆ.
ಪಾಂಗಾಳ ವಿಜಯಾ ಬ್ಯಾಂಕ್ ಬಳಿಯ ತುಳ್ಳೀಮಾರ್ ಮನೆಯ ಕರುಣಾಕರ್ ಕೋಟ್ಯಾನ್ ಮತ್ತು ಹೆಜಮಾಡಿ ಕೋಡಿ ನಡಿಕುದ್ರುವಿನ ಮಲ್ಲಿಕಾ ಕೋಟ್ಯಾನ್ ದಂಪತಿಯ ಪುತ್ರನೇ ತನುಷ್.
ದೈವ, ದೇವರ ಬಗ್ಗೆ ನಂಬಿಕೆ : ಮುಂಬಯಿಯಲ್ಲಿ ಹುಟ್ಟಿ ಬೆಳೆದಿರುವ ತನುಷ್, ತನ್ನ ತಂದೆ-ತಾಯಿಯ ಹುಟ್ಟೂರು, ದೈವ ದೇವರುಗಳ ಬಗ್ಗೆ ಅಪಾರ ಭಕ್ತಿ.
ಕಳೆದ ಜನವರಿಯಲ್ಲಿ ಹೆತ್ತವರ ಜತೆಗೆ ಪಾಂಗಾಳಕ್ಕೆ ಆಗಮಿಸಿ, ದೈವ-ದೇವರು, ನಾಗದೇವರ ವಾರ್ಷಿಕ ತನು ತಂಬಿಲ, ಪಂಚ ಪರ್ವಾದಿಗಳಲ್ಲಿ ಪಾಲ್ಗೊಂಡಿದ್ದರು. ಕಳೆದ ಜನವರಿ ಬೀಡು ಬದಿಯಲ್ಲಿರುವ ಕೊಗ್ಗ ಬನದಲ್ಲಿ ತನುಷ್ ಪರವಾಗಿ ನಾಗದೇವರಿಗೆ ನವಕ ಪ್ರಧಾನ ಹೋಮ, ನವಗ್ರಹ ಪೂಜೆ, ಕಾಳಸರ್ಪ ದೋಷ ನಿವಾರಣೆಗಾಗಿ ವಿಶೇಷ ಪೂಜೆ ನಡೆಸಲಾಗಿತ್ತು. ಇದರಲ್ಲಿ ಸ್ವತಃ ತನುಷ್ ಭಾಗವಹಿಸಿದ್ದರು.
ತನುಶ್ ಕಟಪಾಡಿ ಅಚ್ಚಡ ಸಲ್ಫಾ ಬಡಾವಣೆಯಲ್ಲಿ ಫ್ಲಾಟ್ ಖರೀದಿಸಿದ್ದು ಊರಿಗೆ ಬಂದಾಗ ಪಾಂಗಾಳ, ನಡಿಕುದ್ರು ಮತ್ತು ಕಟಪಾಡಿ ಅಚ್ಚಡದ ಸಲ್ಪಾ ಬಡಾವಣೆಯಲ್ಲಿ ವಾಸವಿರುತ್ತಾರೆ.
ತಂದೆ ಕರುಣಾಕರ್ ಕೋಟ್ಯಾನ್ ಅವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ವಿಶೇಷ ಆಸಕ್ತಿ. ಮುಂಬಯಿ ಟಾಟಾ ಸ್ಪೋರ್ಟ್ಸ್ ನಲ್ಲಿ ಆಡುವ ಅವಕಾಶವನ್ನೂ ಪಡೆದಿದ್ದರು. ಆದರೆ ಅವಕಾಶ ತಪ್ಪಿದಾಗ ಕೋಚ್ ಆಗಿ, ರಣಜಿಯಲ್ಲಿ ಅಂಪಾಯರ್ ಆಗಿ ಕ್ರಿಕೆಟ್ ಸೇವೆ ಮುಂದುವರಿಸಿದ್ದರು. ತನಗೆ ತಲುಪಲಾಗದ ಗುರಿಯೆಡೆಗೆ ಮಗನನ್ನು ಸಜ್ಜುಗೊಳಿಸಿದರು. ಮಗನನ್ನು ಮುಂಬಯಿ ರಣಜಿ ತಂಡಕ್ಕೆ ಸೇರ್ಪಡೆಗೊಳಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಮೊಮ್ಮಗನ ಪರಾಕ್ರಮಕ್ಕೆ ಹೆಮ್ಮೆ:
ಮೊಮ್ಮಗನ ಕ್ರಿಕೆಟ್ ಸಾಧನೆಯನ್ನು ಕಂಡು ಖುಷಿಯಾಗುತ್ತಿದೆ. ನಮಗೆ ಮೊಮ್ಮಗನ ಸಾಧನೆಯ ಬಗ್ಗೆ ಮಾಹಿತಿ ಸಿಕ್ಕಿದ್ದು, ಮುಂದೆ ಆತ ಐಪಿಎಲ್ ಮತ್ತು ಭಾರತ ತಂಡದಲ್ಲೂ ಸೇರ್ಪಡೆಗೊಳ್ಳಲಿ ಎಂದು ಪಾಂಗಾಳ ತುಳ್ಳಿಮಾರ್ ಹೌಸ್‌ನಲ್ಲಿ ವಾಸವಿರುವ ಕುಟುಂಬದ ದೈವದ ಮುಕ್ಕಾಲ್ತಿ ಕೆ.ಕೆ. ಪೂಜಾರಿ ಅವರ ಆಶಯವಾಗಿದೆ.
ಮಗನ ಸಾಧನೆ ಬಗ್ಗೆ ತಂದೆಯ ಖುಷಿ:
ಕಳೆದ 3 ವರ್ಷಗಳಿಂದ ರಣಜಿ ತಂಡದಲ್ಲಿರುವ ತನುಷ್ ನಿರಂತರ ಸಾಧನೆ ಮಾಡುತ್ತಿದ್ದಾನೆ. 4 ತಿಂಗಳ ಹಿಂದೆ ದಕ್ಷಿಣ ವಲಯ ವಾಣಿಜ್ಯ ತೆರಿಗೆ ವಿಭಾಗಕ್ಕೆ ಆಯ್ಕೆಯಾಗಿದ್ದ ತನುಷ್ ಗೋವಾಕ್ಕೆ ಪೋಸ್ಟಿಂಗ್ ಪಡೆದಿದ್ದು, ಈಗ ರಣಜಿ ಪಂದ್ಯದಲ್ಲಿ ಪ್ರಥಮ ಶತಕ ಬಾರಿಸಿದ್ದಾನೆ.
ಈ ಸಾಧನೆಯ ಹಿಂದೆ ಮಗನ ಕಠಿಣ ಪರಿಶ್ರಮ, ಪ್ರಯತ್ನ ಮತ್ತು ಹೋರಾಟದ ಮನೋಭಾವ ಮುಖ್ಯ ಪಾತ್ರ ನಿರ್ವಹಿಸಿದೆ ಎನ್ನುತ್ತಾರೆ ತಂದೆ ಕರುಣಾಕರ್ ಕೋಟ್ಯಾನ್ ಮತ್ತು ತಾಯಿ ಹೆಜಮಾಡಿ ಕೋಡಿ ನಡಿಕುದ್ರುವಿನ ಮಲ್ಲಿಕಾ ಕೋಟ್ಯಾನ್.
ತನಿಶ್ ಪರಿಚಯ:
ತನುಷ್ ಜನಿಸಿದ್ದು ಮುಂಬಯಿಯ ಚೆಂಬೂರ್ ನಲ್ಲಿ ಒಂದರಿಂದ 7ನೇ ತರಗತಿ ವರೆಗೆ ವಿಕ್ರೋಲಿಯ ಸೇಂಟ್ ಜೋಸೆಫ್ ಸ್ಕೂಲ್ ನಲ್ಲಿ, 8ರಿಂದ 10ರ ತನಕ ವಿ.ಎನ್ ಸುಳೆ ಗುರೂಜಿ ಇಂಗ್ಲಿಷ್ ಸ್ಕೂಲ್ ನಲ್ಲಿ ಬಳಿಕ ರಾಮ್ ನಿರಂಜನ್ ಜುನ್‌ಜುನ್ ವಾಲಾ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡಿದರು.
ಯಾವುದೇ ತರಬೇತುದಾರರ ನೆರವಿಲ್ಲದೆ, ಬೇರೆಯವರನ್ನು ನೋಡಿ, ಮೇಲೇರಿದ ಸಾಧಕ ಈ ತನುಷ್. ದಾದರ್ ಯೂನಿಯನ್ ಎಸ್ಸಿ ಪರ ಆಡಲಾರಂಭಿಸಿದ ತನುಷ್, 2017ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದರು. ಬರೋಡ ವಿರುದ್ಧ ತನುಷ್ ಕೋಟ್ಯಾನ್ ಅಜೇಯ 120 ರನ್ ಬಾರಿಸಿದ್ದಾರೆ.
ತನುಷ್ ಭವಿಷ್ಯ ಉಜ್ವಲ ಆಗಲೆಂದು “eMEDIAಕನ್ನಡ”ದ ಹಾರೈಕೆ