# Tags
#fastival

ಶಿರ್ವ : 16ನೇ ವರ್ಷದ “ಕೊರಗರ ಭೂಮಿ ಹಬ್ಬ” ಸಂಪನ್ನ (Shirva : 16th “Koragara Bhoomi Habba” festival)

ಶಿರ್ವ : 16ನೇ ವರ್ಷದಕೊರಗರ ಭೂಮಿ ಹಬ್ಬ” ಸಂಪನ್ನ

(Shirva) ಶಿರ್ವ : ಕೊರಗ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ ಕರ್ನಾಟಕ – ಕೇರಳ ಇದರ ವತಿಯಿಂದ 16ನೇ ವರ್ಷದ “ಕೊರಗರ ಭೂಮಿ ಹಬ್ಬವು” ಪೆರ್ನಾಲ್‌ನ ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ನಡೆಯಿತು.

 ಕಾರ್ಯಕ್ರಮದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಮ್ಮ ನ್ಯಾಯ ಕೂಟದ ನ್ಯಾಯಾಧೀಶರಾದ ಬಾಲರಾಜ್ ಕೋಡಿಕಲ್ ಅವರು ದ್ವಜಾರೋಹಣ ನೆರವೇರಿಸಿ, ಹಬ್ಬದ ಶುಭ ಸಂದೇಶ ನೀಡಿದರು.

  ಬೇಬಿ ಮಧುವನ ಹಾಗೂ ಪ್ರತೀಕ್ಷಾ ಶಂಕರ ನಾರಾಯಣ ಅವರು ಹಬ್ಬದ ಜ್ಯೋತಿ ಬೆಳಗಿಸಿದರು.

  ಸಭಾ ಕಾರ್ಯಕ್ರಮವನ್ನು ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಅವರು ಡೋಲು ಬಾರಿಸುವ ಮೂಲಕ ಹಾಗೂ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. 

 ಈ ಸಂದರ್ಭ ಮಾತನಾಡಿದ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ, ಹಬ್ಬದ ಶುಭ ಸಂದೇಶ ನೀಡಿ, ಸಮುದಾಯದವರು ಸರಕಾರದಲ್ಲಿ ಇರುವಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಮುದಾಯದ ಯುವ ಜನತೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

  ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್  ಮಾತನಾಡಿ, ಸಮಾಜದಲ್ಲಿ  ಶಿಸ್ತು ಬದ್ದವಾಗಿರುವ ಸಮುದಾಯ ಕೊರಗ ಸಮುದಾಯ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಈ ಭೂಮಿಯ ಮೂಲ ನಿವಾಸಿಗಳು ಅವರ ಭೂಮಿಯ ಹಕ್ಕಿಗಾಗಿ ಅಹೋರಾತ್ರಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಕಂಡು ಬೇಸರವಾಯಿತು.   

  ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧನಾಗಿದ್ದೇನೆ. ಅಲ್ಲದೆ ಇನ್ನು ಒಂದು ವಾರದೊಳಗೆ ಸರಕಾರದ ಬಳಿ ಮಾತನಾಡಿ, ಕೊರಗ ಅಭಿವೃದ್ಧಿ ಸಂಘಗಳು ಒಕ್ಕೂಟದ ನಿಯೋಗವನ್ನು ಮುಖ್ಯ ಮಂತ್ರಿ ಅವರ ಬಳಿ ಕರೆದುಕೊಂಡು  ಹೋಗುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

  ಹಬ್ಬದ ಸಂದೇಶ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಬಿತಾ ಗುಂಡ್ಮಿ ಮಾತನಾಡಿ,  9 ಸಾವಿರ ವರ್ಷಗಳ ಪರಂಪರೆ ಇರುವ ಸಮುದಾಯ ಕೊರಗ ಸಮುದಾಯ. ಈ ಸಮುದಾಯ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಕಾರಣ ಹೋರಾಟದ ಪ್ರಕ್ರಿಯೆಗೆ ಒಳಗಾಯಿತು. ಈಗಲೂ ಆಹಾರ, ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಡುವ ಪರಿಸ್ಥಿತಿ ಇದೆ. 16 ವರ್ಷಗಳ ಹಿಂದೆ ಸಿಕ್ಕಂತಹ ಭೂಮಿಗೆ ಇನ್ನೂ ಪುನರ್ವಸತಿ ಭಾಗ್ಯ ಸಿಕ್ಕಿಲ್ಲ. ಆದರೆ ಈ ಹೋರಾಟದ ಫಲವಾಗಿ 500 ಕ್ಕೂ ಹೆಚ್ಚು ಕುಟುಂಬ ಭೂಮಿಯನ್ನು ಪಡೆದುಕೊಂಡಿದೆ. 1000 ಕ್ಕೂ ಅಧಿಕ ಯುವಕರು ಉತ್ತಮ ಶಿಕ್ಷಣ ಪಡೆಯುವಂತಾಗಿದೆ . ಭೂಮಿ ಹಬ್ಬ  ಇಡೀ ಕರ್ನಾಟಕದ ಬುಡಕಟ್ಟು ಸಮುದಾಯಗಳಿಗೆ ಮಾದರಿಯಾಗಿದೆ. ಸಮುದಾಯದ ಶೈಕ್ಷಣಿಕ ಸಾಮಾಜಿಕ ಬದಲಾವಣೆ ಮುಂದಿನ ಅಭಿವೃದ್ಧಿಗೆ ಮೇಲುಗೈ ಸಾಧಿಸುವಂತಾಗಬೇಕು. ಸರ್ವಾಂಗೀಣ ಅಭಿವೃದ್ಧಿ ಆಗಬೇಕಾದರೆ ಔದ್ಯೋಗಿಕ ಭದ್ರತೆ ಬೇಕು. ಆರೋಗ್ಯ ಭದ್ರತೆ ಬೇಕು. ಕೊರಗ ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿ ಅಭಿವೃದ್ಧಿ ಪಡೆಯುವಲ್ಲಿ ಜನಪ್ರತಿಧಿಗಳು ಸಹಕಾರ ನೀಡಬೇಕು ಎಂದರು.

  ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಮ್ಮ ನ್ಯಾಯ ಕೂಟದ ನ್ಯಾಯಾಧೀಶರಾದ ಬಾಲರಾಜ್ ಕೋಡಿಕಲ್ ಅವರು ಮಾತನಾಡಿ, ಸಮುದಾಯವು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು. ಹಾಗೂ ಸಮುದಾಯದ ಏಳಿಗೆಗೆ ಹೋರಾಟ ಅನಿವಾರ್ಯವಾಗಿದೆ. ಎಲ್ಲರ ಸಹಕಾರವೂ ಅಗತ್ಯ ಎಂದರು.

 ಐಟಿಡಿಪಿ ಇಲಾಖೆಯ ಇಲಾಖೆಯ ಯೋಜನಾ ಸಮನ್ವಯ ಅಧಿಕಾರಿ ಎಂ ನಾರಾಯಣ ಸ್ವಾಮಿ ಅವರು ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಈಗಿನ ಯುವ ಸಮುದಾಯದ ಮೇಲೆ ಇದೆ. ಸಮುದಾಯದ ಕಲೆಯನ್ನು ಸ್ಪಾರ್ಧಾತ್ಮಕ ಜಗತ್ತಿಗೆ ಪ್ರಚುರ ಪಡಿಸಬೇಕು. ಸಮುದಾಯದ ಕಲೆಯನ್ನು ಒಂದು ಜಿಲ್ಲೆಗೆ ಸೀಮಿತವಾಗಿರಿಸದೆ, ರಾಷ್ಟ್ರ, ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸುವಂತಾಗಬೇಕು. ಸಮುದಾಯದ ಜನರು, ಅಳುಕು ಮನೋಭಾವ ಹಿಂಜರಿಕೆ ಬಿಟ್ಟು ಸಮಾಜದ ಮುಂದೆ ಬರಬೇಕು. ಯುವ ಜನತೆ ಸಾಮಾಜಿಕ ಜಾಲತಾಣ , ಅಂಯಜಾರ್ಜಾಲದ ಚಟಕ್ಕೆ ಬಲಿಯಾಗದೆ ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದರು.

 ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ ಕೇರಳ ಇದರ ಅಧ್ಯಕ್ಷ ಸುಶೀಲ ನಾಡ   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೊರಗ ಮುಖಂಡ ಮೋಹನ್ ಅಡ್ವೆ ಅವರು ಗಿಡ ನೆಟ್ಟು ಪರಿಸರ ಕಾಳಜಿಯ ಸಂದೇಶ ನೀಡಿದರು.

 ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕರಾದ ಕೆ ಪುತ್ರನ್ ಹೆಬ್ರಿ ಅವರು ಸ್ವಾಗತಿಸಿದರು.

ಸಮುದಾಯ ಕಾರ್ಯಕರ್ತರಾದ ಸುಪ್ರಿಯಾ ಕಿನ್ನಿಗೋಳಿ ಧನ್ಯವಾದ ನೀಡಿದರು. ಸುರೇಂದ್ರ ಕಳ್ತೂರು ಹಾಗೂ ವಿಮಲಾ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು.

  ಬೆಳಿಗ್ಗೆ 9:30ಕ್ಕೆ ಶಿರ್ವ ಕೆನರಾ ಬ್ಯಾಂಕ್ ವೃತ್ತದಿಂದ ಆರಂಭವಾಗಿ ಶಿರ್ವ ಪೇಟೆ ಮೂಲಕ ಪೆರ್ನಾಲ್ ವರೆಗೆ ಕಾಲ್ನಾಡಿಗೆ ಜಾಥ ಹಮ್ಮಿಕೊಳ್ಳಲಾಯಿತು. ಈ ಜಾಥವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಮುದಾಯದ ಯುವ ಪ್ರತಿಭೆಗಳಿಂದ ಡೋಲು ವಾದನ, ಡೋಲು ಕುಣಿತ, ಹಾಡು ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಟನೆಗಳ ಒಕ್ಕೂಟ ಇದರ ಉಪಾಧ್ಯಕ್ಷರಾದ ಐತಪ್ಪ ವರ್ಕಾಡಿ, ಪೆರ್ನಾಲಿನ ಸಮಗ್ರ ಗ್ರಾಮೀಣ ಅಭಿವೃದ್ಧಿ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ಹಾಗೂ ಕೊರಗ ಸಮುದಾಯದ ಮುಖಂಡರು, ಸಮುದಾಯದ ಬಾಂಧವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2