ಉಡುಪಿ ಕೃಷ್ಣಮಠದಲ್ಲಿ ಮಧ್ಯರಾತ್ರಿ 11.42ಕ್ಕೆ ಕೃಷ್ಣಾಪುರ ಶ್ರೀಪಾದರಿಂದ ಅರ್ಘ್ಯ ಪ್ರದಾನ
ಕೃಷ್ಣಮಠದಲ್ಲಿ ಮಧ್ಯರಾತ್ರಿ 11.42ಕ್ಕೆ ಕೃಷ್ಣಾಪುರ ಶ್ರೀಪಾದರಿಂದ ಅರ್ಘ್ಯ ಪ್ರದಾನ, ಸಂಭ್ರಮದ ಕೃಷ್ಣಾಷ್ಠಮಿ
ಉಡುಪಿ: ಕೃಷ್ಣಮಠದಲ್ಲಿ ಮಧ್ಯರಾತ್ರಿ 11.42ಕ್ಕೆ ಕೃಷ್ಣನ ಅವತಾರ ಗಳಿಗೆಯಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ನಂತರ ಹೊರಗೆ ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ಪ್ರದಾನ ಮಾಡಿದರು.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮತ್ತು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದಲೂ ಅರ್ಘ್ಯ ಪ್ರದಾನ ನಡೆಯಿತು.
ಬಳಿಕ ಸಾರ್ವಜನಿಕರಿಂದ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಿತು. ಇದರೊಂದಿಗೆ ಭಕ್ತಿಶೃದ್ಧೆಯ ಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಂಡಿದೆ.
ಉಡುಪಿಯಲ್ಲಿ ಗುರುವಾರ ಕೃಷ್ಣ ಭಕ್ತರು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮಾಧ್ವ ಭಕ್ತರು ತಂತಮ್ಮ ಮನೆಗಳಲ್ಲಿ ಉಪವಾಸವಿದ್ದು, ಜಪತಪ ಪಾರಾಯಣಗಳನ್ನು ನಡೆಸಿದರು.
ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕೃಷ್ಣನಿಗೆ ವಿಶೇಷ ಮಹಾಪೂಜೆಯನ್ನು ನಡೆಸಿ, ವಿವಿಧ ಬಗೆಯ ಲಡ್ಡು, ಚಕ್ಕುಲಿ ಇತ್ಯಾದಿಗಳನ್ನು ಸಮರ್ಪಿಸಿದರು. ಮಧ್ಯರಾತ್ರಿ 11.42ರ ಮುಹೂರ್ತದಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡುವುದರೊಂದಿಗೆ ಕೃಷ್ಣನ ಜಯಂತಿಯನ್ನು ಸಾಂಪ್ರದಾಯಬದ್ಧವಾಗಿ ಆಚರಿಸಲಾಯಿತು.
ಗುರುವಾರ ಶ್ರೀ ಕೃಷ್ಣಮಠವು ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಕೃಷ್ಣಮಠಕ್ಕೆ ಆಗಮಿಸಿ ಅಲಂಕೃತ ಬಾಲ ಕೃಷ್ಣನ ದರ್ಶನ ಪಡೆದರು.
ಕೃಷ್ಣ ಜಯಂತಿಯ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ ಮೊಸರು ಮೆಲ್ಲುತ್ತಿರುವ ಬಾಲಕೃಷ್ಣನ ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
ರಥಬೀದಿಯಲ್ಲಿ ಹೊರಜಿಲ್ಲೆಗಳಿಂದ ಬಂದ 20ಕ್ಕೂ ಹೆಚ್ಚು ಮಂದಿ ಹೂ-ಹಣ್ಣಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸಿದರು. ಈ ಬಾರಿ ಮಳೆ ಇಲ್ಲದೇ ಇರುವುದು ಈ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಯಿತು.
* ಭರ್ಜರಿ ಹುಲಿವೇಷ
ಉಡುಪಿಯ ಕೃಷ್ಣಾಷ್ಟಮಿಯ ವಿಶೇಷತೆಯಾಗಿರುವ ಹುಲಿವೇಷ ಕುಣಿತ ಭರ್ಜರಿಯಾಗಿ ನಡೆಯಿತು. ಸುಮಾರು 10ಕ್ಕೂ ಹೆಚ್ಚು ಹುಲಿವೇಷ ತಂಡಗಳು ನಗರದ ಪ್ರಮುಖ ಅಂಗಡಿ ಹೊಟೇಲ್‌ಗಳ ಮುಂದೆ ವಿಧವಿಧವಾಗಿ ಕುಣಿದು ಜನರ ಮನರಂಜಿಸುತ್ತಿದ್ದವು. ಯಕ್ಷಗಾನದ ರಾಕ್ಷಸ ಇತ್ಯಾದಿ ವೇಷಗಳು ಕೂಡ ನಗರಾದ್ಯಂತ ಸಂಚರಿಸುತ್ತಾ ಹಣ ಸಂಗ್ರಹಿಸುವುದು ಕಂಡುಬಂತು.
* ಗಮನ ಸೆಳೆದ ರವಿ ಕಟಪಾಡಿ
ಅಶಕ್ತ ಕುಟುಂಬಗಳ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ವೇಷ ಹಾಕಿ ಹಣ ಸಂಗ್ರಹಿಸುವ ರವಿ ಕಟಪಾಡಿ ಅವರು ಈ ಬಾರಿಯೂ ವೇಷ ಹಾಕಿ ಕಟಪಾಡಿ, ಮಲ್ಪೆ, ಪಡುಕರೆ ಸುತ್ತಮುತ್ತ ವೇಷ ಪ್ರದರ್ಶಿಸಿದ್ದಾರೆ. ಅವರು ಈ ಬಾರಿ ಸೀ ಫೋಕ್ ಎಂಬ ಹಾಲಿವುಡ್ ಸಿನಿಮಾದ ವೇಷ ಹಾಕಿದ್ದು, ಇಂದು ಉಡುಪಿ ನಗರದಲ್ಲಿ ವೇಷ ಪ್ರದರ್ಶಿಸಲಿದ್ದಾರೆ.
* ಇಂದು ಲೀಲೋತ್ಸವ
ಬುಧವಾರ ಮಠದೊಳಗೆ ಕೃಷ್ಣಾಷ್ಟಮಿ ಸಂಪ್ರದಾಯಬದ್ಧ ಪೂಜೆ ಧಾರ್ಮಿಕ ಅನುಷ್ಠಾನಗಳೊಂದಿಗೆ ನಡೆದರೆ, ಇಂದು ರಥಬೀದಿಯಲ್ಲಿ ಸಾರ್ವಜನಿಕರ ಭಾಗಿತ್ವದಲ್ಲಿ ವೈಭವದ ಕೃಷ್ಣ ಲೀಲೋತ್ಸವ- ಮೊಸರು ಕುಡಿಕೆ ನಡೆಯಲಿದೆ.
3 ಗಂಟೆಗೆ ಉತ್ಸವ ಆರಂಭವಾಗಿ, ಚಿನ್ನದ ರಥದಲ್ಲಿ ಕೃಷ್ಣನ ಮೃಣ್ಮಯ ವಿಗ್ರಹಕ್ಕೆ ರಥೋತ್ಸವ, ರಥದಿಂದ ಕೃಷ್ಣನಿಗೆ ಅರ್ಪಿಸಿದ ಚಕ್ಕುಲಿ ಉಂಡೆಗಳನ್ನು ಭಕ್ತರಿಗೆ ವಿತರಣೆ, ನಡುವೆ ಗೊಲ್ಲ ವೇಷಧಾರಿಗಳಿಂದ ಮೊಸರಿನ ಗಡಿಗೆಗಳನ್ನು ಒಡೆಯುವ ಸಂಪ್ರದಾಯ ನಡೆಯಲಿದೆ. ನಂತರ ಕೃಷ್ಣನ ಮೃಣ್ಮಯ ವಿಗ್ರಹವನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವ ಮೂಲಕ ಕೃಷ್ಣ ಜನ್ಮಾಷ್ಟಮಿಗೆ ತೆರೆ ಬೀಳಲಿದೆ.