# Tags
#ಅಪಘಾತ

ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ; ಒಂದೇ ಕುಟುಂಬದ ನಾಲ್ವರು ಮೃತ್ಯು (House wall collapse in ullala : Four members of the same family died)

  ಉಳ್ಳಾಲದಲ್ಲಿ ಮನೆ ಗೋಡೆ ಕುಸಿತ; ಒಂದೇ ಕುಟುಂಬದ ನಾಲ್ವರು ಮೃತ್ಯು

(Mangaluru)  ಮಂಗಳೂರು: ಮನೆಯ ಕಂಪೌಡ್ ತಡೆಗೋಡೆ ಮನೆಯ ಮೇಲೆ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

 ಮನೆಯ ಯಜಮಾನ ಯಾಸಿರ್(45), ಅವರ ಪತ್ನಿ ಮರಿಯಮ್ಮ (40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಮಲಗಿದ್ದಲ್ಲಿಯೇ ಮೃತಪಟ್ಟವರು.

 ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

 ರಾತ್ರಿಯಿಡೀ ಮಳೆಯಾದ ಪರಿಣಾಮ ಕಂಪೌಂಡ್ ವಾಲ್ ಹಾಗೂ ಎರಡು ಅಡಿಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದಿದೆ.

 ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಾಲೆ ಹಾಗೂ ಕಾಲೇಜಿಗೆ ತೆರಳುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಲೀಸ್ ಗೆ ನೀಡಿ ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ಸಾಗಿದ್ದರು.

ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಂಪೌಂಡ್ ಕುಸಿದಿದ್ದು, ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ, ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಕೊನೆಯ ಮೃತದೇಹವನ್ನು ಹೊರತೆಗೆದಿದ್ದಾರೆ.

ದೊಡ್ಡಮಗಳು ರಶೀನಾ ಕೇರಳ ಕಡೆಗೆ ವಿವಾಹ ಮಾಡಿಕೊಡಲಾಗಿದ್ದು, ಬಕ್ರೀದ್ ಗೆಂದು ಬಂದವರು ನಿನ್ನೆಯಷ್ಟೇ ಗಂಡನ ಮನೆಗೆ ವಾಪಸ್ಸಾಗಿದ್ದರು ಎಂದು ತಿಳಿದು ಬಂದಿದೆ.

ಅತ್ಯಂತ ನೋವಿನ ಸಂಗತಿ, ಸರಕಾರದಿಂದ ಕುಟುಂಬಕ್ಕೆ ಗರಿಷ್ಠ ಪರಿಹಾರ : ಯು.ಟಿ.ಖಾದರ್

 ಕುತ್ತಾರು ಮದನಿನಗರ ಘಟನಾ ಸ್ಥಳಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಭೇಟಿ ನೀಡಿದರು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ‘ಅತ್ಯಂತ ನೋವಿನ ಸಂಗತಿಯಾಗಿದೆ. ಪ್ರಕೃತಿ ನಮ್ಮ ಕೈಯ್ಯಲಿಲ್ಲ ದೇವರ ಕೈಯಲ್ಲಿದ್ದು, ಯಾಸೀರ್ ಕುಟುಂಬಸ್ಥರ

ನೋವಿನ ಜೊತೆಗೆ ಎಲ್ಲರೂ ಇದ್ದೇವೆ. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಜಿಲ್ಲಾಧಿಕಾರಿ, ಸಿಇಒ ಜೊತೆಗೆ ಚರ್ಚಿಸಿ ತಾತ್ಕಾಲಿಕ ಪರಿಹಾರ ತಕ್ಷಣ ಕ್ರಮಕೈಗೊಳ್ಳಲಾಗುವುದು. ಪರಿಹಾರ ಸಂಬಂಧಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಸಂಪರ್ಕಿಸಿ ಸರಕಾರದಿಂದ ಸಾಧ್ಯವಾದಷ್ಟು ಸಹಕಾರ ನೀಡುವ ಕುರಿತು ಚರ್ಚಿಸಲಾಗಿದೆ. ಮದನಿ ನಗರದ ಎಲ್ಲಾ ಯುವಕರು, ಗ್ರಾ.ಪಂ ಸದಸ್ಯರ ಕಾರ್ಯಾಚರಣೆ ಶ್ಲಾಘಿಸುತ್ತೇನೆ. ಸರಕಾರದ ಅಧಿಕಾರಿಗಳ ಜೊತೆಗೆ ಸಹಕರಿಸಿ ಎಲ್ಲಾ ರೀತಿಯಲ್ಲೂ  ಕುಟುಂಬಸ್ಥರಿಗೆ ಸಹಕರಿಸುತ್ತೇವೆ.

 ಮಗಳು ಬಂದ ತಕ್ಷಣ ಗೌರವಪೂರ್ವಕವಾಗಿ ಎಲ್ಲರೂ ಸೇರಿಕೊಂಡು ಅಂತ್ಯಸಂಸ್ಕಾರ ನಡೆಸಲಾಗುವುದು. ಸರಕಾರ, ಶಿಕ್ಷಣ ಇಲಾಖೆಯ ಪರಿಹಾರದ ಕುರಿತು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ. ಸರಿಯಿರುವ ಪ್ರದೇಶದಲ್ಲೂ ಪ್ರಕೃತಿ ವಿಕೋಪಗಳು ನಡೆದಿದೆ. ಸರಕಾರ, ಮನೆ ಕಟ್ಟುವವರಿಗೆ ಎಲ್ಲರಿಗೂ ಇದು ಎಚ್ಚರಿಕೆಯ ಸಂದೇಶ. ಮೇಲೆ ಮನೆ ಕಟ್ಟುವವರು ಕೆಳಗಿನ ಮನೆಯವರ ಬಗ್ಗೆ ಕಾಳಜಿ ವಹಿಸಿ.  ಆರ್ಥಿಕ ಸಂಕಷ್ಟದಿಂದ ಕೆಲವರು ಅನಿವಾರ್ಯ ರೀತಿಯಲ್ಲಿ ಮನೆಯನ್ನು ಕಟ್ಟುತ್ತಿದ್ದಾರೆ. ಕರಾವಳಿಯ ವಾತಾವರಣ ಅಪಾಯಕಾರಿಯಾಗಿದೆ.

ಮೇಲಿನ ಮನೆಯು ಆತಂಕದಲ್ಲಿದ್ದು, ಮಣ್ಣು ತೆಗೆದಲ್ಲಿ ಅದು ಬೀಳುವ ಸಾಧ್ಯತೆಯಿದೆ. ಸ್ಯಾಂಡ್ ಬ್ಯಾಗ್ ತಾತ್ಕಾಲಿಕ ಪರಿಹಾರ ಮಳೆಗಾಲ ಮುಗಿಯುವವರೆಗೂ ನಡೆಸಲಾಗುವುದು. ಸರಕಾರದ ನಿಯಮ ಮೀರಿ ಮನೆ ನಿರ್ಮಿಸದಂತೆ ಸ್ಥಳೀಯಾಡಳಿತ ಎಚ್ಚರಿಕೆ ವಹಿಸಬೇಕು ಎಂದರು.

ದುರಂತ ನಡೆದ ಸ್ಥಳಕ್ಕೆ ದ. ಕ ಜಿಲ್ಲಾಧಿಕಾರಿ ಮುಲೈಮುಗಿಲನ್‌ ಭೇಟಿ ನೀಡಿ ಮನೆ ನಿರ್ಮಿಸಲು ತುರ್ತು ಪರಿಹಾರ ನೀಡುವ ಭರವಸೆ ನೀಡಿದರು.

ಘಟನಾ ಸ್ಥಳಕ್ಕೆ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು, ಸಮಾಜ ಸೇವಕ ಪದ್ಮರಾಜ್‌ ಮತ್ತಿತರ ಗಣ್ಯರು ಭೇಟಿ ನೀಡಿ ಸಂತಾಪ ವ್ಯಕ್ತ ಪಡಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2