ಕಡಲಿಗಿಳಿದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು
ಮಲ್ಪೆ: ಬಿಪರ್ ಜಾಯ್ ಚಂಡಮಾರುತದ ಅಬ್ಬರ ತಣ್ಣಗಾಗಿದೆ.ಮುಂಗಾರು ಮಳೆ ಕ್ಷೀಣಗೊಂಡಿದ್ದು ಪ್ರಕ್ಷುಬ್ಧಗೊಂಡ ಕಡಲು ಶಾಂತವಾಗಿದೆ. ಹೀಗಾಗಿ ನಾಡದೋಣಿ ಮೀನುಗಾರರು ಸಮುದ್ರದತ್ತ ಮುಖ ಮಾಡಿದ್ದಾರೆ.
ರಾಜ್ಯದ ಕರಾವಳಿಯಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಮಳೆಗಾಲದ ನಿಷೇಧ ಇದೆ. ಮೀನುಗಳ ಸಂತಾನೋತ್ಪತ್ತಿ ಮಳೆಗಾಲದಲ್ಲಿ ಆಗುವುದರಿಂದ ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆಗೆ ಅವಕಾಶ ಇಲ್ಲ. ಈ ಸಮಯದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಸಂಪ್ರದಾಯಿಕವಾಗಿ, ಸಮುದ್ರ ತೀರದಲ್ಲಿ ಮೀನುಗಾರಿಕೆ ನಡೆಸುತ್ತಾರೆ.
ಈ ಬಾರಿ ಜೂನ್‌ನಲ್ಲಿ ಚಂಡಮಾರುತದ ಎಫೆಕ್ಟ್ ನಿಂದ ಕಡಲು ಪ್ರಕ್ಷುಬ್ಧಗೊಂಡ ಕಾರಣ ನಾಡದೋಣಿ ಮೀನುಗಾರರಿಗೆ ಕಡಲಿಗೆ ಇಳಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ದಡದಲ್ಲೇ ದೋಣಿಗಳನ್ನು ಲಂಗರು ಹಾಕಿದ್ದರು.
ಈಗ ಸಮುದ್ರ ಶಾಂತವಾದ ಹಿನ್ನೆಲೆಯಲ್ಲಿ ಇಂದಿನಿಂದ ನಾಡದೋಣಿಗಳು ಕಡಲಿಗೆ ಇಳಿದು ಮೀನುಗಾರಿಕೆ ನಡೆಸಲಿವೆ. ಈ ಬಾರಿ ಚಂಡಮಾರುತದಿಂದ ಸಮುದ್ರ ಪ್ರಕ್ಷುಬ್ಧಗೊಂಡ ಕಾರಣ ಒಳ್ಳೆಯ ಫಿಶಿಂಗ್ ಆಗುವ ಆಶಾವಾದ ನಾಡದೋಣಿ ಮೀನುಗಾರರದ್ದು.