ಕಾಂಗ್ರೆಸ್‌ನಿಂದ ಸೇಡಿನ ರಾಜಕಾರಣ ; ಬಸವರಾಜ ಬೊಮ್ಮಾಯಿ ಆರೋಪ
ಸಿದ್ದರಾಮಯ್ಯ ಸಿಎಂ ಆಗಿ ಐದು ವರ್ಷ ಪೂರೈಸುವುದು ಸಚಿವರಿಗೇ ಅನುಮಾನ: ಬಸವರಾಜ ಬೊಮ್ಮಾಯಿ
ಬಾಗಲಕೋಟೆ : ರಾಜ್ಯದ ಜನತೆಗೆ ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ವಾರಂಟಿಯೇ ಮುಗಿಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸೇಡಿನ ರಾಜಕಾರಣ ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮಾತ್ರಕ್ಕೆ ಏನೆಲ್ಲ ಮಾಡಲು ಆಗಲ್ಲ. ಅಧಿಕಾರದಲ್ಲಿ ಇರುವ ಪಕ್ಷದ ನಿರ್ದೇಶನದಂತೆ ಪೊಲೀಸರು ನಡೆದುಕೊಳ್ಳಬಹುದು. ಆದರೆ, ಅವರಿಗೆ ಕಾನೂನು-ಸಂವಿಧಾನವೇ ತಂದೆ-ತಾಯಿ ಇದ್ದಂತೆ. ಅದನ್ನು ಬಿಟ್ಟು ಪೊಲೀಸರು ಏನೂ ಮಾಡಲು ಆಗಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಗಲಾಟೆ ಮಾಡುವ ಪರಿಪಾಠ ನಡೆದಿದೆ. ನಾವು ಕಾರ್ಯಕರ್ತರ ಜತೆಗೆ ಇರುತ್ತೇವೆ. ಯಾರೂ ಎದೆಗುಂದಬೇಕಿಲ್ಲ ಎಂದು ಹೇಳಿದರು.
ಸೋಲು ಗೆಲುವು ಸಾಮಾನ್ಯ
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದಾಗ ದೊಡ್ಡ ಮನುಷ್ಯ ಇರಬೇಕು. ಸೋತಾಗ ಗಟ್ಟಿ ಮನುಷ್ಯ ಇರಬೇಕೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಯಾರೂ ಎದೆಗುಂದಬೇಕಿಲ್ಲ. ಒಂದು ಚುನಾವಣೆಯಲ್ಲಿ ಸೋತರೆ, ಯಾವುದೇ ನಾಯಕರ ಭವಿಷ್ಯ ಅಥವಾ ಹಣೆಬರಹ ಬದಲಾಗಲ್ಲ. ಇಂದಿನ ಸೋಲೇ, ನಾಳೆಯ ಯಶಸ್ಸಿನ ಮೆಟ್ಟಿಲು ಎಂದು ಎಲ್ಲರೂ ಭಾವಿಸೋಣ ಎಂದು ಹೇಳಿದರು.
ರಾಜಕಾರಣಿಗಳು, ಕೇವಲ ಅಧಿಕಾರಕ್ಕಾಗಿ ಮಾತ್ರ ರಾಜಕೀಯ ಮಾಡಬಾರದು. ರಾಜಕಾರಣದಲ್ಲಿ ಎರಡು ರೀತಿ ಇದೆ. ಒಂದು ಅಧಿಕಾರಕ್ಕಾಗಿ, ಇನ್ನೊಂದು ಜನರಿಗಾಗಿ. ಅಧಿಕಾರಕ್ಕಾಗಿ ರಾಜಕೀಯ ಮಾಡಿದರೆ, ನಾನು ಏನು ಮಾಡಿದೆ, ನೀನು ಏನು ಮಾಡಿದೆ ಎಂಬ ಪ್ರತಿಷ್ಠೆ ಬರುತ್ತವೆ. ಅದೇ ಜನರಿಗಾಗಿ ರಾಜಕೀಯ ಮಾಡಿದರೆ, ಸೇವೆ ಒಂದೇ ಮುಖ್ಯವಾಗುತ್ತದೆ. ಬಾಗಲಕೋಟೆ, ಸಕ್ಕರೆ ನಾಡು. ಇಲ್ಲಿನ ಜನರು ಸಿಹಿ ರಸಕೊಡುವ ಕಬ್ಬಿನಂತೆ. ಆಂತರಿಕ ಸಮಸ್ಯೆ ಇರುತ್ತವೆ. ಅವುಗಳನ್ನು ಬದಿಗಿಟ್ಟು ಮುನ್ನಡೆಯೋಣ. ಯಾರೂ ಸೋಲಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ಅಲ್ಲಾಡ್ಸು ಹಾಡಿನಂತಾದ ಸಿದ್ದು ಕುರ್ಚಿ
ರಾಜ್ಯದ ಜನರಿಗೆ ಐದು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಒಂದು ಗ್ಯಾರಂಟಿ ಕೂಡ ಸರಿಯಾಗಿ ಈಡೇರಿಸಲು ಆಗಿಲ್ಲ. ಸಿದ್ದರಾಮಯ್ಯ ಸಿಎಂ ಆದ ತಕ್ಷಣ ವಿಜಯಪುರದ ಸಚಿವರೊಬ್ಬರು, ಸಿದ್ದು ಐದು ವರ್ಷ ಸಿಎಂ ಎಂದು ಹೇಳಿದರು, ಹಾಗೆಯೆ ಮೈಸೂರು ಭಾಗದ ಸಚಿವರೊಬ್ಬರು ಹೇಳಿದರು. ಐದು ವರ್ಷ ಸಿದ್ದು ಸಿಎಂ ಆಗಿರೋದು ಅವರ ಸಚಿವ-ಶಾಸಕರಲ್ಲೇ ಸಂಶಯ ಬಂದಿದೆ. ಹೀಗಾಗಿ ಇದು 6ನೇ ಗ್ಯಾಂಟಿಯಾಗಿ ಸಿದ್ದು ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳುತ್ತ ಹೊರಟಿದ್ದಾರೆ. ಅಲ್ಲಾಡ್ಸು ಅಲ್ಲಾಡ್ಸು ಎಂಬ ಸಿನೆಮಾ ಹಾಡಿನಂತೆ, ಸಿದ್ದರಾಮಯ್ಯ ಅವರ ಸಿಎಂ ಖುರ್ಚಿ ಪರಿಸ್ಥಿತಿ ಆಗಿದೆ ಎಂದು ವ್ಯಂಗ್ಯವಾಡಿದರು.
ಸಂತ್ರಸ್ತರೊಂದಿಗೆ ಹೋರಾಟ:
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರು, ಏಕರೂಪದ ದರ ಕೊಡಿ ಎಂದು 2013ರಿಂದ 2018ರ ವರೆಗೆ ಹೋರಾಟ ಮಾಡಿದರೂ ಕಾಂಗ್ರೆಸ್‌ನವರು ಸ್ಪಂದಿಸಲಿಲ್ಲ. ಕೃಷ್ಣೆಯ ಕಡೆಗೆ ನಡಿಗೆ ಮಾಡಿ, ಅಧಿಕಾರ ಅನುಭವಿಸಿ ಓಡಿ ಹೋದರು. ಒಂದು ಸಭೆಯನ್ನೂ ಸಂತ್ರಸ್ತರೊಂದಿಗೆ ಮಾಡಲಿಲ್ಲ. ನಾನು ಸಿಎಂ ಆದ ಬಳಿಕ ಮೂರು ಸಭೆ ನಡೆಸಿ, ಸಂತ್ರಸ್ತರಿಗೆ ಏಕರೂಪದ ದರ ಘೋಷಣೆ ಮಾಡಿ, ಪರಿಹಾರ ನೀಡಲು 5 ಸಾವಿರ ಕೋಟಿ ಮೀಸಲಿಟ್ಟಿದ್ದೇವು. ಈಗಿನ ಕಾಂಗ್ರೆಸ್ ಸರ್ಕಾರ, ಸಂತ್ರಸ್ತರಿಗೆ ಏಕರೂಪದ ದರ ಕೊಡಲೇಬೇಕು. ಅದು 25ರಿಂದ 35 ಸಾವಿರ ಕೋಟಿಯಾದರೂ ಸಂತ್ರಸ್ತರಿಗೆ ಕೊಡಬೇಕು. ಇಲ್ಲದಿದ್ದರೆ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಸಂತ್ರಸ್ತರೊಂದಿಗೆ ನಾವು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
000000000