ಕಾಪು ಕರಂದಾಡಿ ಶಾಲೆಗೆ ವಿ ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದಿಂದ ಕಾಯಕಲ್ಪ(We make some one smile heping hand team Helps Karandadi Kannada School)
ಕಾಪು ಕರಂದಾಡಿ ಶಾಲೆಗೆ ವಿ ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದಿಂದ ಕಾಯಕಲ್ಪ
(Kaup) ಕಾಪು : ಸಮಾಜ ಸೇವೆಯನ್ನು ತನ್ನ ಉಸಿರಾಗಿಸಿಕೊಂಡಿದ್ದ ಸಮಾಜರತ್ನ ದಿ| ಕೆ. ಲೀಲಾಧರ ಶೆಟ್ಟಿ ಅವರ ಕನಸಿನ ಕೂಸಾದ ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯನ್ನು ಅವರ ಕನಸಿನಂತೆ ಸ್ವಚ್ಛ ಮತ್ತು ಸುಂದರ ಸಂಸ್ಥೆಯನ್ನಾಗಿ ಕಟ್ಟಿ, ಬೆಳೆಸುವಲ್ಲಿ ವಿ ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಹೆಸರಿನ ಸಮಾನ ಮನಸ್ಕರ ತಂಡವು ನಡೆಸುತ್ತಿರುವ ಮಹತ್ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸಮಾನ ಮನಸ್ಕ ಯುವಕರು ಜತೆಗೂಡಿ ವಿ ಮೇಕ್ ಸಮ್ ವನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ಹೆಸರಿನಲ್ಲಿ ವಾಟ್ಸಾಪ್ ಮತ್ತು ವೆಬ್‌ಸೈಟ್ ಖಾತೆ ತೆರೆದು, ಅದರ ಮೂಲಕವಾಗಿ ಸಮಾಜ, ಸಮಾಜಗೋಸ್ಕರ, ಅದರಲ್ಲೂ ಬಡವರಿಗೆ ಮತ್ತು ಮಕ್ಕಳಿಗಾಗಿ ಒಳಿತನ್ನು ಮಾಡಲು ಹಾಗೂ ಅವರ ಮುಖದಲ್ಲಿ ಸಂತೋಷದ ಛಾಯೆ ತರಲು ಪ್ರಯತ್ನಿಸುತ್ತಿದೆ.
ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳಿಂದ ಕೊರತೆಯಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಗುರುತಿಸಿ, ಅವುಗಳನ್ನು ಇಂದಿನ ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆಧುನಿಕತೆಗೆ ತಕ್ಕಂತೆ ನವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣದಲ್ಲಿ ಶಿಕ್ಷಣ ಪಡೆಯಲು ಪ್ರೇರಣೆ ನೀಡುವುದು ಈ ತಂಡದ ಮುಖ್ಯ ಉದ್ದೇಶವಾಗಿದೆ.
ಕಳೆದ ಏಳು ವರ್ಷಗಳಲ್ಲಿ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಪಕ್ಕದ ಕೇರಳ ರಾಜ್ಯವೂ ಸೇರಿದಂತೆ ಸುಮಾರು ೧೬ ಶಾಲೆಗಳನ್ನು ನವೀಕರಿಸಿದೆ. ತಂಡದ ಸದಸ್ಯರು, ಸದಸ್ಯರ ಕುಟುಂಬಸ್ಥರು ಮತ್ತು ಅವರ ಸ್ನೇಹಿತ ವರ್ಗದವರ ನೆರವನ್ನು ಪಡೆದೇ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಈ ತಂಡದ ವಿಶೇಷತೆಯಾಗಿದೆ.
ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಮಾರು ನಾಲ್ಕೂವರೆ ಲಕ್ಷ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸಿದೆ. ಶಾಲೆಯ ನೆಲಹಾಸಿಗೆ ಸಂಪೂರ್ಣ ಟೈಲ್ಸ್ ಅಳವಡಿಕೆ, ಗೋಡೆಗೆ ಸುಣ್ಣ, ಬಣ್ಣ, ಬೆಂಚ್ ಮತ್ತು ಡೆಸ್ಕ್‌ಗಳ ರಿಪೇರಿ, ಸಂಪೂರ್ಣ ಹೊಸ ವಯರಿಂಗ್, ವಿದ್ಯುತ್ ವ್ಯವಸ್ಥೆ ಜೋಡಣೆ, ಕಲಾಕೃತಿಗಳ ರಚನೆ ಅಳವಡಿಕೆ ಮೊದಲಾದ ಕೆಲಸ ನಡೆಸುವ ಮೂಲಕ ಕರಂದಾಡಿ ಶಾಲೆಗೆ ಹೊಸ ಲುಕ್ ನೀಡಿದೆ.
ನಮ್ಮ ತಂಡದ ಸದಸ್ಯರಿಗೆ ಲೀಲಾಧರ ಶೆಟ್ಟಿ ಅವರ ಸೇವಾಗುಣಗಳು ಪ್ರೇರಣೆ ನೀಡಿವೆ. ಹಾಗಾಗಿ ಈ ಶಾಲೆ ಅಭಿವೃದ್ಧಿ ಮೂಲಕ ಲೀಲಾಧರ ಶೆಟ್ಟಿ ಅವರ ಕನಸು ನನಸಾಗಿಸಿದ ಸಂತೃಪ್ತಿಯಿದೆ ಎನ್ನುತ್ತಾರೆ ತಂಡದ ಸದಸ್ಯರು.