ಕುತ್ತಾರು ಕೊರಗಜ್ಜ ಕ್ಷೇತ್ರದ ಮಹಿಮೆ – ನಟಿ ಮಾಲಾಶ್ರೀಯವರ ಕೋರಿಕೆ ಈಡೇರಿಸಿದ ಕೊರಗಜ್ಜ
ಕುತ್ತಾರು ಆದಿ ಕ್ಷೇತ್ರದಲ್ಲಿ ಕಾರಣಿಕ ಮೆರೆದ ಕೊರಗಜ್ಜ – ಮೂರೇ ತಿಂಗಳಲ್ಲಿ ಈಡೇರಿತು ಈ ನಟಿಯ ಕೋರಿಕೆ!
ಮಂಗಳೂರು: ತುಳುನಾಡಿನ ಕಾರಣಿಕದ ಶಕ್ತಿ ಕೊರಗಜ್ಜನ ಕಾರಣಿಕ ಮತ್ತೊಮ್ಮೆ ಲೋಕಮುಖಕ್ಕೆ ಪರಿಚಯಗೊಂಡಿದೆ. ಇಲ್ಲಿನ ಕುತ್ತಾರು ಕೊರಗಜ್ಜನ ಆದಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿ ಹೋಗಿದ್ದ ಮೂರೇ ತಿಂಗಳಿನಲ್ಲಿ ತಮ್ಮ ಬೇಡಿಕೆ ಈಡೇರಿದ ಕಾರಣದಿಂದ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಕನಸಿನ ಕನ್ಯೆ ಮಾಲಾಶ್ರೀ ಇದೀಗ ಕುತ್ತಾರಿಗೆ ಕುಟುಂಬ ಸಮೇತ ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ.
ಆ.09ರ ಬುಧವಾರದಂದು ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರಕ್ಕೆ ತಮ್ಮ ಮಗಳು ಅನನ್ಯಾಳೊಂದಿಗೆ ಆಗಮಿಸಿದ ಮಾಲಾಶ್ರಿ ಅವರು ಇಲ್ಲಿ ಕೊರಗಜ್ಜನಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಆ ಬಳಿಕ ನಮ್ಮ ಕೋರಿಕೆ ಪವಾಡ ಸದೃಶವಾಗಿ ಈಡೇರಿತ್ತು. ಈ ಕ್ಷೇತ್ರದ ಶಕ್ತಿ ಅಪಾರವಾದುದು ಮತ್ತು ಇಲ್ಲಿ ಬಹಳಷ್ಟು ಪಾಸಿಟಿವ್ ಎನರ್ಜಿ ಇರುವುದು ನೀವಿಲ್ಲಿಗೆ ಬಂದಾಗಲೇ ನಿಮ್ಮ ಅನುಭವಕ್ಕೆ ಬರುತ್ತದೆ..’ ಎಂದು ಮಾಲಾಶ್ರೀ ಹೇಳಿದ್ದಾರೆ.
ನಮ್ಮ ಬೇಡಿಕೆಯನ್ನು ಕೊರಗಜ್ಜ ಈಡೇರಿಸಿದ ಕಾರಣ ಹರಕೆ ತೀರಿಸಿ ಆಶೀರ್ವಾದ ಪಡೆದುಕೊಳ್ಳುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆ ನಾನಿಲ್ಲಿ ಬಂದಿದ್ದೇನೆ, ಮುಂದೆಯೂ ಬರುತ್ತೇನೆ ಎಂದು ಮಾಲಾಶ್ರಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗ ತನಿಯ ಸೇವಾ ಸಮಿತಿಯ ಟ್ರಸ್ಟಿಗಳು ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು.