ಜಿಲ್ಲೆಯ ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಸೌಲಭ್ಯಕ್ಕಾಗಿ ಪ್ರವಾಸೋದ್ಯಮ ಸಚಿವರಿಗೆ ಬೆಂಗಳೂರಿನಲ್ಲಿ ಮನವಿ
ಉಡುಪಿ ಜಿಲ್ಲೆಯ ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಸೌಲಭ್ಯಕ್ಕಾಗಿ ಪ್ರವಾಸೋದ್ಯಮ ಸಚಿವರಿಗೆ ಬೆಂಗಳೂರಿನಲ್ಲಿ ಮನವಿ
ಬೆಂಗಳೂರು, ಆಗಸ್ಟ್ 08: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ, ವೇತನ ಹೆಚ್ಚಿಸುವ ಹಾಗೂ ಉದ್ಯೋಗ ಭದ್ರತೆಯನ್ನು ಕಲ್ಪಿಸಿ ಕೊಡಬೇಕು ಎಂದು ಬೆಂಗಳೂರಿನ ವಿಧಾನಸೌಧದಲ್ಲಿರುವ ಪ್ರವಾಸೋದ್ಯಮ ಸಚಿವರ ಕಛೇರಿಗೆ ಸೋಮವಾರ ತೆರಳಿ ಸಚಿವರಾದ ಕೆ.ಎಚ್.ಪಾಟೀಲ್‌ರವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌ನ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿ ಮಿತ್ರರೊಡನೆ ಸಚಿವರ ಉಪಸ್ಥಿತಿಯಲ್ಲಿ, ಸಚಿವರ ಆಪ್ತ ಕಾರ್ಯದರ್ಶಿವರು, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಮತ್ತು ಕೆ.ಎಸ್.ಟಿ.ಡಿ.ಸಿ ನಿರ್ದೇಶಕರು ಹಾಗೂ ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರು ಸಹ ಈ ಸಭೆಯಲ್ಲಿ ಹಾಜರಿದ್ದರು.
ಕರ್ನಾಟಕ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ೨೦೧೫ ರಲ್ಲಿ ಸ್ಥಾಪಿತಗೊಂಡ “ಪ್ರವಾಸಿ ಮಿತ್ರ ಯೋಜನೆ” ಸುಮಾರು ಎಂಟು ವರ್ಷಗಳು ಕಳೆದರೂ ಯೋಜನೆಯಲ್ಲಿ ಅಡಕವಾಗಿರುವ ಮೂಲಭೂತ ಸೌಕರ್ಯಗಳು, ವೇತನ, ಉದ್ಯೋಗ ಭದ್ರತೆಗಳಾಗಲಿ ಯೋಜನೆ ಅನುಷ್ಠಾನಗೊಳಿಸಿದಾಗನಿಂದ ಇಲ್ಲಿಯವರೆಗೂ ಯಾವುದೇ ರೀತಿಯಿಂದ ಇಲಾಖೆಯಿಂದಾಗಲಿ ಸರ್ಕಾರದಿಂದಾಗಲಿ ಪ್ರವಾಸಿ ಮಿತ್ರರಿಗೆ ದೊರಕಿಸಿ ಕೊಟ್ಟಿರುವುದಿಲ್ಲ ಎಂದು ಯೋಜನೆಯಲ್ಲಿ ಅಡಕವಾಗಿರುವ ಸೌಲಭ್ಯಗಳ ಕೆಲವು ದಾಖಲಾತಿಗಳೊಂದಿಗೆ ಸಚಿವರಿಗೆ ಹಾಗೂ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಲಾಯಿತು.
ಮನವಿಗೆ ಸ್ಪಂದಿಸಿದ ಪ್ರವಾಸೋದ್ಯಮ ಸಚಿವರಾದ ಎಚ್. ಕೆ. ಪಾಟೀಲ್, ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಡನೆ ಸಭೆ ನಡೆಸಿ ಒಂದು ವಾರದ ಒಳಗಾಗಿ ತಮ್ಮ ಬೇಡಿಕಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸಿ ಮಿತ್ರರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಕೆ. ಹನುಮಂತರೆಡ್ಡಿ, ಉಪಾಧ್ಯಕ್ಷ ಅಶ್ವಥ್, ರಾಜ್ಯ ಪ್ರಧಾನ
ಕಾರ್ಯದರ್ಶಿ ಗಂಗಾಧರ್, ರಾಜ್ಯ ಖಜಾಂಚಿ ಸುನಿತಾ ಕುಮಾರಿ, ಸಂಘಟನಾ ಕಾರ್ಯದರ್ಶಿ ಮರೇಶ್, ರಾಜ್ಯ ನಿರ್ದೇಶಕ ರಾಘವೇಂದ್ರ, ರಾಜ್ಯ ನಿರ್ದೇಶಕಿ ವಿಜಯಲಕ್ಷ್ಮಿ ಹಾಗೂ ಉಡುಪಿ ಜಿಲ್ಲೆಯ ಮಾಜಿ ರಾಜ್ಯ ಸಹ ಖಜಾಂಚಿ ಸುಬ್ರಹ್ಮಣ್ಯ ಮತ್ತು ಜಿಲ್ಲಾ ಖಜಾಂಚಿ ಅಕ್ಷಯ್, ರಾಜ್ಯ ಪದಾಧಿಕಾರಿಗಳು ಮತ್ತು ವಿವಿಧ ಜಿಲ್ಲೆಗಳು ಪದಾಧಿಕಾರಿಗಳು ಮತ್ತು ಸದಸ್ಯರುಗಳು ಹಾಜರಿದ್ದರು.