# Tags
#ರಾಜಕೀಯ

 ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದ ಮೋದಿಯವರನ್ನು ಕರೆಸಿಕೊಂಡಿರುವುದು ನಾರಾಯಣ ಗುರುಗಳ ಶಕ್ತಿ: ದೀಪಕ್ ಕೋಟ್ಯಾನ್(The power of Sri Narayana Guruji : Udupi youth congress President Deepak kotian)

 ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದ ಮೋದಿಯವರನ್ನು ಕರೆಸಿಕೊಂಡಿರುವುದು ನಾರಾಯಣ ಗುರುಗಳ ಶಕ್ತಿ: ದೀಪಕ್ ಕೋಟ್ಯಾನ್

  (Udupi) ಉಡುಪಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಿಲ್ಲವರ ಆರಾಧ್ಯ ದೈವವಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊವನ್ನು ನಿಷೇಧಿಸಿ ಈಗ ಚುನಾವಣೆಗಾಗಿ ಅದೇ ನಾರಾಯಣ ಗುರುಗಳ ಕಾಲ ಬುಡಕ್ಕೆ ಬಂದು ಹೂಹಾರ ಹಾಕುವ ಪರಿಸ್ಥಿತಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi)) ಬಂದಿರುವುದು ನಾರಾಯಣ ಗುರುಗಳು ನಿಜವಾದ ಶಕ್ತಿಯನ್ನು ತೋರಿಸಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ (Udupi youth congress President Deepak kotian) ಪತ್ರಿಕಾ ಹೇಳಿಕೆ ನೀಡಿದರು.

ಪ್ರತಿ ಬಾರಿ ಬಿಲ್ಲವ ಸಮುದಾಯ ಹಾಗೂ ಅವರು ಆರಾಧಿಸಿಕೊಂಡು ಬಂದಿರುವ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಅವಮಾನಿಸಿಕೊಂಡು ಬಂದಿರುವ ಬಿಜೆಪಿಗರಿಗೆ ಇದೊಂದು ಪಾಠ ಎಂಬಂತಾಗಿದೆ. ನಾರಾಯಣ ಗುರುಗಳನ್ನು ಅವಮಾನಿಸಿದರೆ ಅದರ ಪ್ರತಿಫಲ ತಾನಾಗಿಯೇ ಅವರಿಗೆ ದೊರೆಯುತ್ತದೆ ಎನ್ನುವುದಕ್ಕೆ ನರೇಂದ್ರ ಮೋದಿಯವರು ಭಾನುವಾರ ಮಂಗಳೂರಿನ ಲೇಡಿಹಿಲ್ ನಾರಾಯಣ ಗುರು ವೃತ್ತದಲ್ಲಿನ ಗುರುಗಳ ಮೂರ್ತಿಗೆ ಹಾರಾರ್ಪಣೆ ಮಾಡುವುದರ ಮೂಲಕ ರೋಡ್ ಶೋ ಗೆ ಚಾಲನೆ ನೀಡುತ್ತಿರುವುದೇ ಸಾಕ್ಷಿ.

 ಕಳೆದ ಬಾರಿ ರಾಷ್ಟ್ರದ ಗಣರಾಜ್ಯೋತ್ಸವ ಪರೇಡ್ ವೇಳೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ವನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಈ ವೇಳೆ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ, ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಮಾಡುವ ಮೂಲಕ ಗುರುಗಳನ್ನು ಅವಮಾನಿಸಿದ್ದರು.

 ಈ ಹಿಂದೆ ರಾಜ್ಯದಲ್ಲಿ ಅಧಿಕಾರಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕೂಡ ಪಠ್ಯ ಪುಸ್ತಕದಿಂದ ನಾರಾಯಣಗುರುಗಳ ವಿಚಾರವನ್ನು ತೆಗೆಯಲು ಶಿಫಾರಸು ಮಾಡಿದಾಗ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ಬಿಜೆಪಿ ಸರಕಾರದಿಂದ ಬಂದಿರಲಿಲ್ಲ.

 ಬಿಲ್ಲವ ಸಮುದಾಯದಿಂದ ಮಂತ್ರಿಯಾಗಿದ್ದ, ಪ್ರಸ್ತುತ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಕೂಡ ಈ ಬಗ್ಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಮಾಡದೆ ಈಗ ನಾನು ಬಿಲ್ಲವ ಸಮುದಾಯದ ಅಭ್ಯರ್ಥಿ ಎಂದು ಜಾತಿ ಕಾರ್ಡ್ ಬಳಸಲು ಹೊರಟಿದ್ದಾರೆ.

 ಕೋಟ ಶ್ರೀನಿವಾಸ ಪೂಜಾರಿಯವರು ಬಿಲ್ಲವ ಸಮುದಾಯದಿಂದ ಇಷ್ಟೊಂದು ದೊಡ್ಡ ಕ್ಯಾಬಿನೆಟ್ ಮಂತ್ರಿಯಾಗಿದ್ದರೂ ಕೂಡ ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಶೂನ್ಯ.

ಕೇವಲ ಭಾಷಣಗಳನ್ನು ಮಾಡಿದ್ದು ಬಿಟ್ಟರೆ ಅವರಿಂದ ಸಮುದಾಯಕ್ಕೆ ಯಾವುದೇ ಲಾಭವಾಗಿಲ್ಲ. ಅವರ ಸಮುದಾಯದ ಒರ್ವ ಹಿರಿಯ ರಾಜಕಾರಣಿ ಮಾಜಿ ಶಾಸಕ ಗೋಪಾಲ ಪೂಜಾರಿಯವರನ್ನು ಭಯೋತ್ಪಾದಕ ಎಂದು ಕರೆದು ಅವಮಾನಿಸಿರುವುದೇ ಅವರ ಸಾಧನೆ ಹೊರತು ಬೇರೆನೂ ಇಲ್ಲ.

 ಬಿಲ್ಲವ ಯುವಕರನ್ನು ತನ್ನ ಸ್ವಾರ್ಥ ಸಾಧನೆಗೆ ಹಾಗೂ ರಾಜಕೀಯ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡು ಬಳಿಕ ಎಸೆಯುವ ಬಿಜೆಪಿ ಪಕ್ಷದ ನಾಯಕರ ಡೋಂಗಿ ಹಿಂದುತ್ವವನ್ನು ಬಿಲ್ಲವ ಸಮುದಾಯ ಇನ್ನಾದರೂ ಅರಿಯುವ ಕಾಲ ಒದಗಿ ಬಂದಿದೆ. ಬಿಜೆಪಿಗರ ಲಾಭಕ್ಕಾಗಿ ಕರಾವಳಿ ಜಿಲ್ಲೆಗಳ ನೂರಾರು ಯುವಕರು ತಮ್ಮ ಜೀವ ಬಲಿ ನೀಡಿದ್ದು, ಅವರ ಕುಟುಂಬಗಳು ಇಂದಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಬಿಜೆಪಿ ನಾಯಕರು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ. ಬಿಲ್ಲವ ಸಮುದಾಯದ ಯುವಕರು ನಾರಾಯಣ ಗುರುಗಳ ಆದರ್ಶವನ್ನು ಪಾಲಿಸಿಕೊಂಡು ಮುನ್ನಡೆಯಬೇಕಾದ ಅಗತ್ಯತೆ ಒದಗಿ ಬಂದಿದೆ.

  ಚುನಾವಣಾ ಸಮಯದಲ್ಲಿ ನಾವು ಬಿಲ್ಲವರು, ನಾವೆಲ್ಲ ಒಂದು ಎಂದು ಹೇಳಿ ಮತ್ತೆ ಗೆದ್ದ ಬಳಿಕ ಕೈಕೊಟ್ಟು ಓಡುವ ಬಿಜೆಪಿಗರ ನಿಜ ಬಣ್ಣ ಬಯಲಾಗಿದೆ.

ಭಾನುವಾರ ಮಂಗಳೂರಿನಲ್ಲಿ ನಡೆಯುವ ಮೋದಿಯವರ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಬಿಲ್ಲವ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿಗರಿಂದ ನಾರಾಯಣ ಗುರುಗಳಿಗೆ ಆಗಿರುವ ಅವಮಾನವನ್ನು ಕಣ್ಣ ಮುಂದೆ ಇಟ್ಟುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2