ತಾನು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರಮೋದ್ ಮಧ್ವರಾಜ್
ತಾನು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಪ್ರಮೋದ್ ಮಧ್ವರಾಜ್
ಉಡುಪಿ: ತಾನು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸಲು ಸಿದ್ಧ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸಮಯದಿಂದ ಉಡುಪಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.
ಟಿಕೆಟ್ ನೀಡಲಿ, ಬಿಡಲಿ ಪಕ್ಷದ ಪರ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಸರಕಾರದಲ್ಲಿ ಕ್ಯಾಬಿನೆಟ್ ಸಚಿವನಾಗಿ ಕೆಲಸ ಮಾಡಿದ್ದೇನೆ. ಮೋದಿ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಸೇರಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ಜವಾಬ್ದಾರಿ ನಿಭಾಯಿಸಿದ್ದೇನೆ ಎಂದರು.
ಹಾಲಿ ಸಂಸದರು ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪದ ಬಗ್ಗೆ ನಾನು ಮಾತ ನಾಡುವುದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಹಲವಾರು ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಒತ್ತುವರಿ, ಕಸ್ತೂರಿ ರಂಗನ್ ವರದಿ ಜಾರಿ, ಹುಲಿ ಯೋಜನೆ, ಬಫರ್ ಝೋನ್, ಅಡಿಕೆ ಎಲೆಚುಕ್ಕಿ ರೋಗ ಮುಂತಾದವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕ ವಾಗಿ ನಿಭಾಯಿಸಬಲ್ಲೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್ ದೊರೆಯದ ಕಾರಣ ಉಡುಪಿ ಸೇರಿದಂತೆ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಕ್ರಿಯವಾಗಿ ಪ್ರಚಾರ ಕಾರ್ಯ ಮಾಡಿದ್ದೆ. ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಅವಕಾಶ ದೊರೆಯದಿದ್ದರೂ ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ವಿಪಕ್ಷಗಳು ಒಗ್ಗೂಡಿ ಇಂಡಿಯಾ ಹೆಸರಿನ ಸಭೆ ನಡೆಸಿದರೂ ಪ್ರಯೋಜವಿಲ್ಲ. ವಿಪಕ್ಷಗಳಿಗೆ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲ. ಈ ಬಗ್ಗೆ ಕೇಳಿದರೂ ಅವರಿಗೆ ಗೊತ್ತಿಲ್ಲ. ಪೈಲಟ್ ಇಲ್ಲದೆ ವಿಮಾನದಲ್ಲಿ ಪ್ರಯಾಣಿಸಿದರೆ ಯಾವ ಅನಾಹುತ ಆಗಲಿದೆಯೋ ಆ ರೀತಿ ಆಗುವುದು ಖಚಿತ.
ದೇಶದಲ್ಲಿ ನರೇಂದ್ರ ಮೋದಿಗೆ ಪರ್ಯಾಯ ನಾಯಕ ಯಾರೂ ಇಲ್ಲ ಎಂದು ಈಗಾಗಲೇ ಸಾಬೀತಾಗಿದೆ ಎಂದರು.