ಬೆಳ್ತಂಗಡಿಯ ಸೌಜನ್ಯ ಕೊಲೆ ಪ್ರಕರಣ: ಮೈಸೂರಿನ ಒಡನಾಡಿ ಸಂಸ್ಥೆ ಎಂಟ್ರಿ
ಮಂಗಳೂರು: ಸೌಜನ್ಯ ಹೋರಾಟಕ್ಕೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಎಂಟ್ರಿ ಕೊಟ್ಟಿದೆ. ಚಿತ್ರದುರ್ಗದ ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ ಮೈಸೂರಿನ ಒಡನಾಡಿ ಸಂಸ್ಥೆ ಇದೀಗ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಹೋರಾಟಕ್ಕೆ ಮುಂದಾಗಿದೆ.
ಈ ಹಿಂದೆ ಮುರುಘಾ ಶ್ರೀ ಪ್ರಕರಣದಲ್ಲಿ ಒಡನಾಡಿ ಸಂಸ್ಥೆ ಹೋರಾಟಕ್ಕಿಳಿದಿತ್ತು. ಇದೀಗ ಸೌಜನ್ಯ ಪರವಾದ ನ್ಯಾಯದ ಹೋರಾಟಕ್ಕೆ ಒಡನಾಡಿ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ದಿವಂಗತ ಸೌಜನ್ಯ ಪರವಾಗಿ ಒಡನಾಡಿ ಸಂಸ್ಥೆ ರಾಜ್ಯಾದ್ಯಾಂತ ಹೋರಾಟ ನಡೆಸಲು ಮುಂದಾಗಿದೆ. ಸೋಮವಾರದಂದು ಸೌಜನ್ಯ ಪರ ಹೋರಾಟಗಾರರನ್ನು ಒಡನಾಡಿಯ ಮುಖಂಡರು ಭೇಟಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಒಡನಾಡಿಯ ಸ್ಥಾಪಕ ಕಾರ್ಯದರ್ಶಿ ಸ್ಟಾನ್ಲಿ, ಧರ್ಮಸ್ಥಳ ಕ್ಷೇತ್ರದಲ್ಲಿ ನಡೆದ ಸೌಜನ್ಯ ಪ್ರಕರಣ ತಲೆ ತಗ್ಗಿಸುವಂತಹ ಘಟನೆ. ಅತ್ಯಾಚಾರ ಮಾಡಿದ ಪಾಪಿಗಳನ್ನು ಇನ್ನೂ ನ್ಯಾಯದ ಕಟ ಕಟೆಗೆ ತರಲಾಗಿಲ್ಲ. ದೇಶದ ಕಾನೂನಿಗೆ ಇದು ಸಾಧ್ಯವಾಗಿಲ್ಲ ಎಂಬುವುದು ನಗೆ ಪಾಟಿಲಿನ ಸಂಗತಿ. ಸಿಬಿಐ ಘನತೆಯನ್ನು ಉಳ್ಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೆ ಮರುತನಿಖೆಯಾಗಬೇಕು. ನಾವು ಈ ಹೋರಾಟದಲ್ಲಿ ಕೈ ಜೋಡಿಸುತ್ತಿದ್ದೇವೆ ಎಂದು ಹೇಳಿದ್ರು.
ಸೌಜನ್ಯಳನ್ನ ಅತ್ಯಾಚಾರ ಮಾಡಿದ್ದು ಯಾರು ಎಂಬುವುದು ಗೊತ್ತಾಗಬೇಕು. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಇದರ ಬಗ್ಗೆ ಹೆಚ್ಚು ಮಾತನಾಡಬೇಕು. ಹೆಗ್ಗಡೆಯವರು ಸಾಮಾಜಿಕ ಜಾವಬ್ದಾರಿ ಅನುಶಾಸನ ಬದ್ಧವಾದ ಹೊಣೆಗಾರಿಕೆ ಹೊತ್ತವರು. ತಮ್ಮ ಮನೆ ಬಾಗಿಲಲ್ಲಿರುವಂತಹ ತಮ್ಮ ಮನೆಯ ಮಗುವಿನ ಮೇಲಾಗಿರುವ ಅತ್ಯಾಚಾರದ ಬಗ್ಗೆ ಮಾತನಾಡಬೇಕು. ಆ ಮಗುವಿಗೆ ಸಂಬಂಧ ಪಟ್ಟವರಿಗೆ ಸಾಂತ್ವನ ಹೇಳುವುದು ಅವರ ಕರ್ತವ್ಯ. ಆ ಮಗುವಿಗೋಸ್ಕರ ನಾನು ಇದ್ದೇನೆ ಎನ್ನೋದು ವೀರೇಂದ್ರ ಹೆಗ್ಗಡೆ ಅವರ ಬಾಯಿಯಿಂದ ಬರಲಿ. ಆ ಮಾತು ಅವರ ಬಾಯಿಯಿಂದ ಬಂದರೆ ನಾವು ಅವರಿಗೆ ಋಣಿಗಳಾಗುತ್ತೇವಿ. ಸೌಜನ್ಯ ಹೋರಾಟ ಧರ್ಮದ ಕಾರ್ಯ. ಸೌಜನ್ಯಳಿಗೆ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಸಂತೋಷ್ ರಾವ್ ಆರೋಪಿಯಲ್ಲ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮತ್ತೆ ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸುತ್ತಿದೆ.