ಮಂಗಳೂರು: ಎಂಎಲ್‌ಸಿ ಐವನ್ ಡಿಸೋಜಾ ನಿವಾಸದ ಮೇಲೆ ಕಲ್ಲು ತೂರಾಟ, ಇಬ್ಬರು ಪೊಲೀಸ್ ವಶಕ್ಕೆ (Mangaluru : Stone pelting on MLC Ivan D’souza’s residence, Two are in police custody)
ಮಂಗಳೂರು: ಎಂಎಲ್‌ಸಿ ಐವನ್ ಡಿಸೋಜಾ ನಿವಾಸದ ಮೇಲೆ ಕಲ್ಲು ತೂರಾಟ; ಇಬ್ಬರು ಪೊಲೀಸ್ ವಶಕ್ಕೆ
ಮಂಗಳೂರು: ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಭರತ್ ಅಲಿಯಾಸ್ ಯಕ್ಷಿತ್ (24), ದಿನೇಶ್ ಕುರ್ತಮೊಗೆರು(20) ಎಂದು ಗುರುತಿಸಲಾಗಿದೆ.
ಆರೋಪಿ ಭರತ್, ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ನಾರಾಯಣ ಕೋಡಿಮನೆ ನಿವಾಸಿ ರಾಘವ ಭಂಡಾರಿ ಪುತ್ರ. ಭರತ್ ವಿರುದ್ಧ ಈ ಹಿಂದೆ 3 ಹಲ್ಲೆ ಪ್ರಕರಣ ದಾಖಲಾಗಿದ್ದವು.
ಇನ್ನೋರ್ವ ಆರೋಪಿ ದಿನೇಶ್ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪರ್ತಿಪಾಡಿ ಮನೆ ನಿವಾಸಿ ಆನಂದ ಪೂಜಾರಿ ಪುತ್ರನಾಗಿದ್ದು, ಕನ್ಯಾನದಲ್ಲಿ ಫೈನಾನ್ಸ್ ವಸೂಲಿಯಲ್ಲಿ ಕೆಲಸ ಮಾಡುತ್ತಿದ್ದ.
ರಾಜ್ಯಪಾಲರ ಬಗ್ಗೆ ಐವನ್ ಡಿಸೋಜಾ ಅವರು ನೀಡಿದ ಹೇಳಿಕೆಯಿಂದ ಸಿಟ್ಟಾಗಿ ಕಲ್ಲೆಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ರಾತ್ರಿ 9:30 ರ ಸುಮಾರಿಗೆ ಹೋಟೆಲ್‌ನಲ್ಲಿ ಊಟ ಮಾಡಿದ ಬಳಿಕ, ನಾವು ಐವನ್ ಡಿಸೋಜಾ ಅವರ ಮನೆಗೆ ಕಲ್ಲು ಎಸೆಯಲು ನಿರ್ಧರಿಸಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.