ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಆಳ್ವಾಸ್ ಕಾಲೇಜಿನ ಬಿ.ಬಿ.ಎ. ವಿದ್ಯಾರ್ಥಿಗಳ ಸನ್ಮಾನ
‘ಗುರಿಯ ಜೊತೆ ದಾರಿಯನ್ನೂ ಸಂಭ್ರಮಿಸಿ’: ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ
ವಿದ್ಯಾಗಿರಿ:‘ಬದುಕಿನಲ್ಲಿ ಸಾಧನೆಯ ಗುರಿಯ ಜೊತೆ ದಾರಿಯನ್ನೂ ಸಂಭ್ರಮಿಸಬೇಕು’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಕುವೆಂಪು ಸಭಾಂಗಣದಲ್ಲಿ ನಡೆದ ‘ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ಆಳ್ವಾಸ್ ಕಾಲೇಜಿನ ಬಿ.ಬಿ.ಎ. ವಿದ್ಯಾರ್ಥಿಗಳ ಸನ್ಮಾನ’ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಬದುಕಿನಲ್ಲಿ ಗುರಿ ಮುಖ್ಯ ಆದರೆ, ಪ್ರಯಾಣವನ್ನೂ ಸಂಭ್ರಮಿಸಿದಾಗ ನೆಮ್ಮದಿ ದೊರಕುತ್ತದೆ ಎಂದ ಅವರು, ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ದೊರೆತ ಯಶಸ್ಸು ಅವರಿಗೊಂದು ಗರಿಮೆ. ಜೊತೆಗೆ ಪೋಷಕ ಮತ್ತು ಶಿಕ್ಷಕರಿಗೂ ಹೆಮ್ಮೆ ಸಂಗತಿ. ಮಾಡುವ ಕೆಲಸದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮ ಇರಲಿ ಎಂದರು.
ಬಿಬಿಎಯಲ್ಲಿ ರ‍್ಯಾಂಕ್ ಪಡೆದ ಸೃಷ್ಟಿ ಜೈನ್ ( ಪ್ರಥಮ ರ‍್ಯಾಂಕ್), ಸಂಘವಿ ಎಚ್.ಆರ್ (೬ನೇ ರ‍್ಯಾಂಕ್), ಕೃಪಾ ಶೆಟ್ಟಿ (೮ನೇ ರ‍್ಯಾಂಕ್) ಅವರನ್ನು ಸನ್ಮಾನಿಸಲಾಯಿತು. ಓಇನಂ ಪೂರ್ಣಚಂದ್ರ ಸಿಂಗ್ (೮ನೇ ರ‍್ಯಾಂಕ್) ಗೈರಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಜೀವನದಲ್ಲಿ ಭರವಸೆ ಕಳೆದುಹೋದಾಗ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ ಬದುಕಿನ ಯಶಸ್ಸು ನಿರ್ಧಾರವಾಗುತ್ತದೆ. ಜೀವನದಲ್ಲಿ ಚಿಕ್ಕ ಚಿಕ್ಕ ನಿರ್ಧಾರ ಕೈ ಗೊಳ್ಳುವುದರ ಜೊತೆಗೆ ೩ ವರ್ಷದ ಪದವಿ ಕೋರ್ಸ್ ಅನ್ನೂ ಸಂಭ್ರಮಿಸಬೇಕು ಎಂದರು.
ಬಿಬಿಎ ವಿಭಾಗದ ಡೀನ್ ಮತ್ತು ಮುಖ್ಯಸ್ಥೆ ಸುರೇಖಾ ರಾವ್, ಪ್ರಾಧ್ಯಾಪಕ ಸಂಯೋಜಕಿ ಸೋನಿ ರಾಜ್ ಇದ್ದರು.
ವಿದ್ಯಾರ್ಥಿನಿ ದೀಪಿಕಾ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ರಂಜಿತಾ ಹಾಗೂ ತಂಡದವರು ಹಾಡಿದರು. ಅಕ್ಷತಾ ಶೆಟ್ಟಿ ನಿರೂಪಿಸಿ, ಸ್ವೀಕೃತ್ ವಂದಿಸಿದರು.