ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತಂಡ ಪ್ರಕಟ
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ತಂಡ ಪ್ರಕಟ
ನವದೆಹಲಿ: ಸದ್ಯದಲ್ಲೇ ಆರಂಭವಾಗಲಿರುವ ನಿಗದಿತ ಐವತ್ತು ಓವರ್ ಗಳ ಏಷ್ಯಾಕಪ್ ಕ್ರಿಕೆಟ್ ನ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದ್ದು ರೋಹಿತ್ ಶರ್ಮಾ ನಾಯಕನಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ.
ಈ ವರ್ಷವೇ ವಿಶ್ವಕಪ್ ನಡೆಯಲಿರುವುದರಿಂದ ಬಹುಪಾಲು ಇದೇ ತಂಡ ವಿಶ್ವಕಪ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದೇ ವೇಳೆ ಗಾಯದಿಂದ ಚೇತರಿಸಿಕೊಂಡ ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮೆನ್ ಶ್ರೇಯಸ್ ಅಯ್ಯರ್ ಭಾರತ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ.
ಇದೇ ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್ ಗಾಗಿ ಬಲಿಷ್ಠ ಭಾರತ ತಂಡ ಪ್ರಕಟಿಸಲಾಗಿದ್ದು, ಸಂಜು ಸ್ಯಾಮ್ಸನ್ ತಂಡದಿಂದ ಹೊರಬಿದ್ದರೆ, ಭರವಸೆಯ ಯುವ ಆಟಗಾರ ತಿಲಕ್ ವರ್ಮಾಗೆ ಏಕದಿನ ಪಂದ್ಯಗಳಿಗೆ ಮೊದಲ ಬುಲಾವ್ ಬಂದಿದೆ.
ಏಷ್ಯಾದ ಬಲಿಷ್ಠ ಆರು ತಂಡಗಳ ನಡುವೆ ಈ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್, ಲಾಹೋರ್ ಒಟ್ಟು 4, ಶ್ರೀಲಂಕಾದ ಕ್ಯಾಂಡಿ ಹಾಗೂ ಕೊಲಂಬೊ ಫೈನಲ್ ಸೇರಿ 9 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಟೂರ್ನಿ ಮಾದರಿ ಹೇಗೆ?
ಆರು ತಂಡಗಳನ್ನು ತಲಾ 3 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ನೇಪಾಳ ‘ಎ’ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ‘ಬಿ’ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ಇನ್ನುಳಿದ 2 ತಂಡದ ವಿರುದ್ಧ ಒಮ್ಮೆ ಸೆಣಸಲಿದೆ.
ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಸೂಪರ್-4 ಹಂತಕ್ಕೇರಲಿವೆ. ಸೂಪರ್- 4ನಲ್ಲಿ ಪ್ರತಿ ತಂಡ ಇನ್ನುಳಿದ 3 ತಂಡದ ವಿರುದ್ಧ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.
ಟೂರ್ನಿಯ ಉದ್ಘಾಟನಾ ಪಂದ್ಯ ಮುಲ್ತಾನ್‌ನಲ್ಲಿ ನಡೆಯಲಿದ್ದು, ಪಾಕಿಸ್ತಾನ - ನೇಪಾಳ ತಂಡಗಳು ಮುಖಾಮುಖಿಯಾಗಲಿವೆ. ಒಂದು ವೇಳೆ ಭಾರತ-ಪಾಕ್ ಸೂಪರ್-4 ಹಂತಕ್ಕೇರಿದರೆ, ಉಭಯ ತಂಡಗಳ ಪಂದ್ಯ ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ನಡೆಯಲಿದೆ.
ಇನ್ನು ಇದಾದ ಬಳಿಕ ಒಂದು ವೇಳೆ ಸೂಪರ್-4 ಹಂತದಲ್ಲಿ ಅದ್ಬುತ ಪ್ರದರ್ಶನ ತೋರುವ ಮೂಲಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದರೆ, ಸೆಪ್ಟೆಂಬರ್ 17ರಂದು ಏಷ್ಯಾಕಪ್ ಫೈನಲ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಏಷ್ಯಾಕಪ್ ಫೈನಲ್ ಪಂದ್ಯ ಕೊಲಂಬೊದ ಪ್ರೇಮದಾಸ ಸ್ಟೇಡಿಯಂ ನಲ್ಲಿ ಸಾಗಿಬರಲಿದೆ.
ಭಾರತ ತಂಡ ಇಂತಿದೆ
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ ತಂಡದಲ್ಲಿದ್ದಾರೆ.