ಶ್ರೀ ಪಲಿಮಾರು ಮೂಲ ಮಠದಲ್ಲಿ ವಾರ್ಷಿಕ ಉದ್ವರ್ತನ, ಮಹಾಭಿಷೇಕ (Udhvarthana at Palimaru Matt)
ಶ್ರೀ ಪಲಿಮಾರು ಮೂಲ ಮಠದಲ್ಲಿ ವಾರ್ಷಿಕ ಉದ್ವರ್ತನ, ಮಹಾಭಿಷೇಕ
(Padubidri) ಪಡುಬಿದ್ರಿ, ಜು. 12: ಶ್ರೀ ಪಲಿಮಾರು ಮೂಲ ಮಠದ ಶ್ರೀ ವೇದವ್ಯಾಸ – ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪಲಿಮಾರು ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ವಾರ್ಷಿಕ ಉದ್ವರ್ತನ, ಮಹಾಭಿಷೇಕಗಳು ಗುರುವಾರ ನೆರವೇರಿತು.
ಹಿರಿಯ ಯತಿಗಳಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಶ್ರೀ ಮಠದ ವಿದ್ವಾಂಸರು, ಪುರೋಹಿತರು ಮತ್ತು ಶಿಷ್ಯರ ಜತೆಗೂಡಿ ದೇವರ ಕೋಣೆಯನ್ನು ಶುಚಿಗೊಳಿಸಿ, ಶ್ರೀ ವೇದವ್ಯಾಸ ದೇವರ ಮತ್ತು ಪಟ್ಟದ ದೇವರಾದ ಶ್ರೀ ಸೀತಾ ರಾಮಚಂದ್ರ ದೇವರಿಗೆ ಪಂಚಾಮೃತ ದ್ರವ್ಯಗಳ ಮೂಲಕವಾಗಿ ವಾರ್ಷಿಕ ಉದ್ವರ್ತನ ಹಾಗೂ ಮಹಾಭಿಷೇಕ ನೆರವೇರಿಸಿದರು.
ವಾರ್ಷಿಕ ಉದ್ವರ್ತನ, ಮಹಾಭಿಷೇಕಗಳ ಬಳಿಕ ಶ್ರೀ ದೇವರು ಶಯನ, ಮಹಾ ವಿಶ್ರಾಂತಿಗೆ ತೆರಳಿ, ಉತ್ಥಾನ ದ್ವಾದಶೀ ದಿನದ ಕ್ಷೀರಾಬ್ಧಿಯೊಂದಿಗೆ ಎದ್ದೇಳುವರೆಂಬುದು ಹಿಂದೂ ಸನಾತನ ಧರ್ಮದ ನಂಬಿಕೆಯಾಗಿದೆ.
ಈ ಧಾರ್ಮಿಕ ವಿಧಿಗಳ ಬಳಿಕ ಶ್ರೀ ದೇವರಿಗೆ ಮಹಾಪೂಜೆ, ಶ್ರೀ ಪಲಿಮಾರು ಮೂಲ ಆಂಜನೇಯ ಸನ್ನಿಧಿಯಲ್ಲಿ ಮಹಾಪೂಜೆ, ವೃಂದಾವನ ಪೂಜಾದಿಗಳು, ಹಸ್ತೋದಕ, ಅನ್ನ ಸಂತರ್ಪಣೆಗಳು ನಡೆದವು.
ಶ್ರೀ ಮಠದ ಆಪ್ತ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ, ಶ್ರೀ ಕಟೀಲು ವೇ| ಮೂ| ಹರಿನಾರಾಯಣ ಆಸ್ರಣ್ಣ, ಕಂಬ್ಳಕಟ್ಟ ಸುರೇಂದ್ರ ಉಪಾಧ್ಯಾಯ, ಬಲರಾಮ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ. ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕಲ್ಕೂರ್, ಯುಗಪುರುಷದ ಭುವನಾಭಿರಾಮ ಉಡುಪ, ನಂದಿಕೂರು ವೇ| ಮೂ| ಮಧ್ವರಾಯ ಭಟ್, ವೇದವ್ಯಾಸ ಐತಾಳ ವೆಂಕಟರಮಣ ಮುಚ್ಚಿಂತಾಯ ಇನ್ನ, ಶ್ರೀ ಮಠದ ಕೊಟ್ಟಾರಿ ಹರೀಶ್ ಕುಮಾರ್ ಹಾಗೂ ಪಲಿಮಾರು ಯೋಗ ದೀಪಿಕಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀಮಠದ ಅಭಿಮಾನಿಗಳು ಉಪಸ್ಥಿತರಿದ್ದರು.