# Tags
#PROBLEMS

ಉಚ್ಚಿಲದಲ್ಲಿ ನಿರಂತರ ಅಪಘಾತ : ಸರ್ವಧರ್ಮ ದೇವರಿಗೆ ಸಾಮೂಹಿಕ ಪ್ರಾರ್ಥನೆ (Frequent accidents in Uchila: All religions appeal for collective prayers to God)

ಉಚ್ಚಿಲದಲ್ಲಿ ನಿರಂತರ ಅಪಘಾತ : ಸರ್ವಧರ್ಮ ದೇವರಿಗೆ ಸಾಮೂಹಿಕ ಪ್ರಾರ್ಥನೆ

(Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪರಿಸರದಲ್ಲಿ ನಿತ್ಯ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಉಚ್ಚಿಲದ ಮಹಾಲಿಂಗೇಶ್ವರ ದೇವಸ್ಥಾನ, ಉಚ್ಚಿಲ ಭಾಸ್ಕರ ನಗರದ ಜುಮ್ಮಾ ಮಸೀದಿ ಮತ್ತು ಉಚ್ಚಿಲದ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಉಚ್ಚಿಲ ಹೆದ್ದಾರಿಯಲ್ಲಿ ಅಪಘಾತದಿಂದಾಗಿ ರಕ್ತದ ಒಕುಳಿಯೇ ಹರಿದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೂರಕ್ಕೂ ಅಧಿಕ ಜನರು ದುರ್ಮರಣ ಹೊಂದಿದ್ದು, ಅದಕ್ಕಿಂತಲೂ ಮೂರು ಪಟ್ಟು ಜನರು ಗಾಯಗೊಂಡಿದ್ದಾರೆ.

ಹೆದ್ದಾರಿ ರಕ್ತ ಬಯಸುತ್ತಿದೆಯೇ ?

 ಇತ್ತಿಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ರಕ್ತವನ್ನು ಬಯಸುತ್ತಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿರುವುದು ಕಂಡುಬರುತ್ತಿದೆ. ಗ್ರಾಮದ ಹಿರಿಯರ ಪ್ರಕಾರ ಅವರ ಮಾತಿಗೆ ಪುಷ್ಠಿ ದೊರಕುತ್ತಿದೆ. ಹೆದ್ದಾರಿ ಪಕ್ಕದಲ್ಲಿ ಹಿಂದೆ ದೈವ ದೇವರ ಗುಡಿಗಳು, ಸ್ಮಶಾನಗಳು ಇದ್ದು, ಹೆದ್ದಾರಿ ಅಗಲೀಕರಣ ಸಂದರ್ಭ ಅದನ್ನು ನೆಲಸಮಗೊಳಿಸಲಾಗಿದೆ. ದೈವದ ಗುಡಿಗಳನ್ನು ನೆಲಸಮಗೊಳಿಸಿದರೂ, ಆ ಕ್ಷೇತ್ರದ ಮಹಿಮೆ ಅಲ್ಲೇ ಉಳಿದಿರುತ್ತದೆ ಎನ್ನುತ್ತಾರೆ ಸ್ಥಳೀಯರು.

ಕಾಪು ಕೊಪ್ಪಲಂಗಡಿ ಹೆದ್ದಾರಿ ಹಿಂದೆ ಮುಸ್ಲಿಮರ ದಫನ ಭೂಮಿ

ಕಾಪು ಬಳಿಯ ಕೊಪ್ಪಲಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳುವ ಮೊದಲು ಆ ಜಾಗ ಮುಸ್ಲಿಂ ದಫನ ಭೂಮಿಯಾಗಿತ್ತು. ಕೊಪ್ಪಲಂಗಡಿ ಕಮ್ಯುನಿಟಿ ಹಾಲ್ ಎದುರುಗಡೆ ದಫನ ಭೂಮಿಯನ್ನು ಸ್ಥಳಾಂತರಿಸಿ, ಅದರ ಮೇಲೆ ಈಗಿನ ಹೆದ್ದಾರಿ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ನಡೆದ ಅಪಘಾತದಲ್ಲಿ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಇದು ನಿತ್ಯ ನಿರಂತರವಾದ ಪರಿಸ್ಥಿತಿಯಾಗಿದೆ. ಇಲ್ಲಿ ಹೆಚ್ಚಾಗಿ ರಾತ್ರಿ ಅಪಘಾತ ಸಂಭವಿಸುತ್ತದೆ.

ಉತ್ಸವ, ಜಾತ್ರೆ ಸಂದರ್ಭದ ಕೋಳಿ ಅಂಕಕ್ಕೆ ತೆರೆ ಕಾರಣವೇ?

 ಹಿಂದೆ ಉತ್ಸವ, ಜಾತ್ರೆಯ ಸಂದರ್ಭ ಕೋಳಿ ಅಂಕ ನಡೆಯುತ್ತಿದ್ದು, ಗಣಗಳಿಗೆ ಇದರಿಂದ ರಕ್ತ ಸಿಗುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದಾರೆ. ಈಗ ಸರಕಾರದ ತೀರ್ಮಾನದಿಂದ ಹೆಚ್ಚಿನ ದೈವಸ್ಥಾನಗಳ ಉತ್ಸವದ ನಂತರ ಕೋಳಿ ಅಂಕವೇ ನಿಂತು ಹೋಗಿದೆ.

ಉಚ್ಚಿಲ ರಥೋತ್ಸವದ ಮೂರನೇ ದಿನ ಕೋಳಿ ಅಂಕ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೊದಲಿಗೆ ಉಚ್ಚಿಲ ರಾಹೆ ೬೬ ಬಳಿಯ ಮುದ್ದು ಶೆಟ್ಟಿ ಅವರ ಮನೆ ಬಳಿ ಕೋಳಿ ಅಂಕಕ್ಕೆ ಚಾಲನೆ ನೀಡಲಾಗುತ್ತಿತ್ತು. ಇದರಿಂದ ಕೋಳಿ ರಕ್ತ ಹೆದ್ದಾರಿ ಪಕ್ಕ ಬೀಳುತ್ತಿತ್ತು. ಸರಕಾರದ ನಿಯಮದಂತೆ ಅಲ್ಲಿ ಕೋಳಿ ಅಂಕವನ್ನೇ ಮಾಡುತ್ತಿಲ್ಲ. ಉಚ್ಚಿಲ ರಥ ಬೀದಿಯಲ್ಲಿ ಕೋಳಿ ಅಂಕಕ್ಕೆ ಪರವಾನಿಗೆ ನೀಡಿದ್ದರೂ, ಕೆಲ ಸಮಯ ಮಾತ್ರ. ಆದರೂ ಪೊಲೀಸರ ರೈಡ್ ಆಗುತ್ತದೆ ಎಂಬ ಭಯದಿಂದ ಎಲ್ಲೆಲ್ಲೋ ಕೋಳಿ ಅಂಕ ಮಾಡುತ್ತಿರುವುದು ಕಂಡುಬಂದಿದೆ.

ಕೋಳಿ ಅಂಕಕ್ಕೆ ಸರಕಾರ ಪರವಾನಿಗೆ ನೀಡಬೇಕೆಂಬ ವಾದ ಅಲ್ಲ. ದೈವ, ದೇವಸ್ಥಾನದ ಉತ್ಸವಕ್ಕಾಗಿ ನಡೆಯುವ ಕೋಳಿ ಅಂಕವನ್ನು ಮಾಡಲು ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಆ ಕಾನೂನನ್ನು ಸಡಿಲಗೊಳಿಸುವ ಅಗತ್ಯತೆ ಇದೆ.

ಕಾಪು ಮಾರಿಗುಡಿಯಲ್ಲಿ ಕೋಳಿಬಲಿ ನಿಷೇಧವಾಗಿತ್ತು

ಹಲವು ವರ್ಷಗಳ ಹಿಂದೆ ಮಾರಿಪೂಜೆಯಂದು ಕಾಪುವಿನ ಮೂರೂ  ಮಾರಿಗುಡಿಗಳಲ್ಲಿ ಕೋಳಿ, ಕುರಿ ಬಲಿ ನೀಡದಂತೆ ಸರಕಾರ ಸುಗ್ರೀವಾಜ್ಞೆ ತಂದಿತ್ತು. ಆ ಸಮಯದಲ್ಲಿ  ಭಕ್ತಾದಿಗಳು ಮತ್ತು ಜಿಲ್ಲಾಡಳಿತಕ್ಕೆ ಒಂದು ಮಟ್ಟಿನ ಸಮರವೇ ನಡೆದಿತ್ತು. ಸರಕಾರ ಕೋಳಿ, ಕುರಿ ಬಲಿ ನೀಡದಂತೆ ತಡೆಯುವಲ್ಲಿ ಯಶಸ್ವಿಯೂ ಆಗಿತ್ತು. ಆದರೆ ಈ ಘಟನೆಯ ನಂತರ ಕಾಪು ರಾಷ್ಟ್ರೀಯ ಹೆದ್ದಾರಿ 66 (ಆಗಿನ ರಾಷ್ಟ್ರೀಯ ಹೆದ್ದಾರಿ17) ರಲ್ಲಿ ಅಪಘಾತಗಳ ಸರಮಾಲೆಯೇ ನಡೆದಿತ್ತು. ಅಮ್ಮನ ಇಂಗಿತದಂತೆ ಕೋಳಿ, ಕುರಿ ಬಲಿ ನೀಡುವಂತೆ ಹೇಳಲಾಗಿತ್ತು. ಸರಕಾರದ ಆದೇಶ ಇದ್ದರೂ, ಜಿಲ್ಲಾಡಳಿತ ಕೋಳಿ ಬಲಿ ಕೊಡುವುದನ್ನು ತಡೆಯಲಿಲ್ಲ. ಇದು ವರ್ಷದ ಮೂರು ಮಾರಿ ಪೂಜೆಯಲ್ಲಿಯೂ ಮುಂದುವರಿದಿತ್ತು.  

 ಅಣ್ಣಮಲೈಯವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರವು ಮತ್ತೆ ಕೋಳಿ ಬಲಿ ನೀಡದಂತೆ ಆದೇಶ ತಂದಿತ್ತು. ಇದನ್ನು ನಿಭಾಯಿಸಿದ ಅಣ್ಣಾಮಲೈ, ಪೋಲಿಸರ ಎದುರು ಕೋಳಿ ಕಡಿಯಬೇಡಿ. ಹಿಂದಿನಿಂದ ಕಡಿದುಕೊಂಡು ಹೋಗಿ ಎಂದು ಜನರಿಗೆ ತಿಳಿ ಹೇಳಿ ಆದೇಶವನ್ನು ಪಾಲಿಸಿದಂತೆ ವರ್ತಿಸಿದ್ದರು.

ಒಟ್ಟಾರೆಯಾಗಿ ಕಾಪು ತಾಲೂಕು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನನಿತ್ಯ ನಡೆಯುವ ಅಪಘಾತ, ರಕ್ತಪಾತಕ್ಕೆ ತೆರೆ ಬೀಳಬೇಕಿದೆ.

ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ನಿಗಮ ಮತ್ತು ಹೆದ್ದಾರಿ ಗುತ್ತಿಗೆದಾರ ಕಂಪನಿಗಳು ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಗ್ರಾಮಸ್ಥರ ಒಕ್ಕೊರಲ ಅಭಿಪ್ರಾಯವಾಗಿದೆ.

 

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2