ಐಕಳ : ಕಂಬಳ ಕೇವಲ ಕ್ರೀಡೆಯಲ್ಲ ತುಳುನಾಡಿನ ಸಂಸ್ಕೃತಿಯ ಪ್ರತೀಕ – ಶ್ರೀ ಚಂದ್ರಶೇಖರ ಸ್ವಾಮೀಜಿ (Aikala: Kambala is not just a sport, it is a symbol of the culture of Tulu Nadu – Sri Chandrashekar Swamiji)
ಐಕಳ : ಕಂಬಳ ಕೇವಲ ಕ್ರೀಡೆಯಲ್ಲ ತುಳುನಾಡಿನ ಸಂಸ್ಕೃತಿಯ ಪ್ರತೀಕ – ಶ್ರೀ ಚಂದ್ರಶೇಖರ ಸ್ವಾಮೀಜಿ
(Aikala) ಐಕಳ : ಕಂಬಳ ಕೇವಲ ಕ್ರೀಡೆಯಲ್ಲ, ತುಳುನಾಡಿನ ಸಂಸ್ಕೃತಿಯ ಪ್ರತೀಕ ಎಂದು ಆಧ್ಯಾತ್ಮಿಕ ವಿಶ್ವ ಗುರು,ಅಂತಾರಾಷ್ಟ್ರೀಯ ವಾಸ್ತುತಜ್ಞ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ವಿಶಿಷ್ಟ ಹಾಗೂ ವೈಭೋವೋಪೇತ ಧಾರ್ಮಿಕ ಹಿನ್ನೆಲೆಯುಳ್ಳ, ತುಳುನಾಡಿನ ಕಾರ್ಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆ ನಾಮಾಂಕಿತ, ಇತಿಹಾಸ ಪ್ರಸಿದ್ಧ 49ನೇ ವರ್ಷದ ಐಕಳ ಕಂಬಳೋತ್ಸವಕ್ಕೆ ಹಾಗೂ ಐಕಳೋತ್ಸವಕ್ಕೆ ಚಾಲನೆ ನೀಡಿದರು.
ಅವರು ಮಾತನಾಡಿ, ಕಂಬಳದ ಹಿಂದಿರುವ ಮೌಲ್ಯ, ವೈವಿಧ್ಯತೆ, ಸಾಂಸ್ಕೃತಿಕ ಶ್ರೀಮಂತಿಕೆ, ಹಾಗೂ ಅದರ ಹಿಂದಿನ ಧಾರ್ಮಿಕ ನಂಬಿಕೆಯು ಕಂಬಳವನ್ನು ತುಳುನಾಡಿನ ಹೆಮ್ಮೆ, ಗೌರವವನ್ನಾಗಿಸಿದೆ. ಜಾತಿ-ಮತ-ಧರ್ಮ ಮೀರಿದ ಸೌಹಾರ್ದತೆಯ ಕ್ರೀಡೆಯಾಗಿ ಕಂಬಳ ಬೆಳೆದಿದೆ ಎಂದರು.
ಕಂಬಳವು ಕೇವಲ ಕರಾವಳಿಗೆ ಸೀಮಿತವಾಗಿರದೆ, ರಾಜ್ಯ ಪ್ರವಾಸೋಧ್ಯಮದ ನಕ್ಷೆಯಲ್ಲಿ ಕಂಗೊಳಿಸಬೇಕು. ಕಂಬಳ ಎಂಬುದು ಜಾನಪದ ಕ್ರೀಡೆ ಎನ್ನುವುದಕ್ಕಿಂತಲೂ ಕರಾವಳಿ ಮಣ್ಣಿನ ಹಬ್ಬ. ಅಭಿಮಾನದ ಸ್ವಾಭಿಮಾನದ ಪ್ರತೀಕವಾಗಿದ್ದು, ಪ್ರಾಣಿ ಮತ್ತು ಮನುಷ್ಯರ ನಡುವಣ ಸಂಬಂಧವಾಗಿ ಬಹಳಷ್ಟು ಮಹತ್ವ ಪಡೆದಿದೆ. ಈ ಸಂಬಂಧವು ಹೆತ್ತ ಮಕ್ಕಳಿನಷ್ಟೇ ಪ್ರೀತಿಯಿಂದ ಕೂಡಿದ್ದು, ಕೋಣಗಳನ್ನು ಮಕ್ಕಳಿನಿಂದಲೂ ಹೆಚ್ಚಿನ ಪ್ರೀತಿಯಿಂದ ಸಾಕಿ ಸಲಹುತ್ತಾರೆ ಎಂದರು.
ಕಂಬಳದ ಮೂಲಕ ಆಚಾರ ವಿಚಾರ, ಕಲೆ, ಆರಾಧನೆ, ಕ್ರೀಡೆಗಳನ್ನು ವಿಭಿನ್ನ ರೀತಿಯಲ್ಲಿ ಜಗತ್ತಿಗೆ ಪರಿಚಯಿಸಿದ ತುಳುನಾಡಿನ ಕ್ರೀಡೆ ನಮ್ಮ ಹೆಮ್ಮೆಯಾಗಿದ್ದು, ಕೃಷಿಕರ ಕ್ರೀಡಾ ಮನೋಭಾವಕ್ಕೆ ಬೆಂಬಲಿಸಿದ ಈ ಕ್ರೀಡೆಯ ಹಿಂದೆ ಮನರಂಜನೆಯೊಂದಿಗೆ ವೈಜ್ಞಾನಿಕ ಕಾರಣಗಳೂ ಇವೆ. ಕೋಣಗಳನ್ನು ಚೆನ್ನಾಗಿ ಸಲಹಲು ಕಂಬಳ ಒಂದೊಳ್ಳೆ ಅವಕಾಶವೂ ಹೌದು.ಇವೆಲ್ಲದರ ಜೊತೆಗೆ ನಮ್ಮ ರೈತ ಬಾಂಧವರಿಗೆ ಪ್ರತಿಷ್ಠೆಯ ತಿಲಕವಾಗಿದೆ ಈ ಕಂಬಳ. ಇವತ್ತು ನಮ್ಮ ಮಣ್ಣಿನ ಒಂದು ಮಹತ್ತರವಾದ ಕಂಬಳ ಗದ್ದೆಯಲ್ಲಿ ಐಕಳೋತ್ಸವಕ್ಕೆ ಚಾಲನೆ ನೀಡಲು ಬಹಳ ಸಂತೋಷವಾಗುತ್ತಿದೆ. ಕಾಂತಾಭಾರೆ ಬೂದಾ ಬಾರೆ ಜೋಡುಕೆರೆ ಕಂಬಳ ಅಂದ್ರೆ ಅದರ ಹುಮ್ಮಸ್ಸು ಬಹಳ ವಿಶೇಷ. ತುಳುನಾಡಿನಲ್ಲಿ ದೈವಾಂಶ ಸಂಭೂತರಾಗಿ ಹುಟ್ಟಿ ವೀರರಾಗಿ ಬೆಳೆದು ದೈವದ ಪಟ್ಟಕ್ಕೇರಿದ ಅವಳಿ ದೈವಗಳಿಗೆ ಸಮರ್ಪಿಸಲಾಗುವ ಈ ವಿಶೇಷ ಕಂಬಳ.
ನಮ್ಮ ಪೂರ್ವಜರು ಪಾರ್ದನಗಳ ರೂಪದಲ್ಲಿ ಅದೆಷ್ಟೋ ಸಂಸ್ಕೃತಿ ಸಲಹೆಗಳನ್ನು ನಮಗೆ ನೀಡಿದ್ದರು.ಇವೆಲ್ಲವನ್ನೂ ಹಾಗೆ ಜೋಪಾನ ಮಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ. ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗದೆ ನಮ್ಮ ತನವನ್ನು ಉಳಿಸಿ ಬೆಳೆಸಬೇಕೆಂದೂ ಸ್ವಾಮೀಜಿ ಹೆಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಕಳ ಬಾವ ಕುಟುಂಬದ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಡಾ. ಕೆಪಿಕೆ ಹೆಗ್ಡೆ ವಹಿಸಿದ್ದರು.
ಏಳಿಂಜೆ ದೇವಸ್ಥಾನದ ಅರ್ಚಕರಾದ ಗಣೇಶ್ ಭಟ್ ಹಾಗೂ ವರುಣ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಂಬಳದ ಕರೆಯನ್ನು ಅದಾನಿ ಫೌಂಡೇಶನ್ ನ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಿದರು.
ಕಟೀಲು ಕ್ಷೇತ್ರದ ಅರ್ಚಕ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣ, ಕಿರೆಂ ರೆಮೆದಿ ಅಮ್ಮನವರ ದೇವಾಲಯದ ಪ್ರಧಾನ ಧರ್ಮ ಗುರು ರೆ. ಫಾ. ಒಸ್ವಾಲ್ಡ್ ಮೊಂತೆರೋ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾಜೀ ಸಚಿವ ಕೃಷ್ಣ ಜೆ ಪಾಲೆಮಾರ್, ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸೀನಿಯರ್ ಕಮಾಂಡೆಂಟ್ ವೀರೇಂದ್ರ ಮೋಹನ್ ಜೋಷಿ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಮಾತೃಶ್ರೀ ಶಾರದಮ್ಮ, ವಿಶ್ವನಾಥ ಭಟ್ ಎಸ್. ಕೋಡಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕ ಪುನೀತ್ ಕೃಷ್ಣ, ಮಂಗಳೂರು ಕೆಎಂಎಫ್‌ನ ಅಧ್ಯಕ್ಷ ಕೆಪಿ ಸುಚರಿತ ಶೆಟ್ಟಿ, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಐಕಳಬಾವ ಯಜಮಾನರಾದ ದೋಗಣ್ಣ ಸಿ ಶೆಟ್ಟಿ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ಡಾ ದೇವಿ ಪ್ರಸಾದ್ ಶೆಟ್ಟಿ, ಮುಂಬೈ ಸಮಿತಿ ಅಧ್ಯಕ್ಷ ಕುಶಲ್ ಭಂಡಾರಿ ಐಕಳ ಬಾವ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಉಪಾಧ್ಯಕ್ಷರಾದ ವೈ ಯೋಗೀಶ್ ರಾವ್, ಪ್ರಮೋದ್ ಶೆಟ್ಟಿ ಐಕಳ ಬಾವ, ಕೃಷ್ಣ ಮಾರ್ಲ, ಸಂಚಾಲಕ ಮುರಳಿಧರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಜೊತೆ ಕೋಶಾಧಿಕಾರಿ ಶರತ್ ಶೆಟ್ಟಿ ಸ್ಥಳಂತಗುತ್ತು, ಸಂತೋಷ್ ಶೆಟ್ಟಿ ತೆಂಕರ ಗುತ್ತು, ಸಂಘಟನಾ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ಮುಂಡ್ಕೂರು, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ದೇವಿದಾಸ್ ಶೆಟ್ಟಿ ಕಲ್ಪ ಕಿನ್ನಿಗೋಳಿ, ಹರೀಶ್ ಶೆಟ್ಟಿ ತಾಮಣಿಗುತ್ತು, ಸುಕುಮಾರ್ ಭಂಡಾರಿ ಐಕಳ ಬಾವ, ದಯೇಶ್ ಕೋಟ್ಯಾನ್, ಸೌರಭ್ ಕೃಷ್ಣ ಶೆಟ್ಟಿ, ಸೂರಜ್ ಶೆಟ್ಟಿ, ವೇಣು ವಿನೋದ್ ಶೆಟ್ಟಿ, ಕೃಷ್ಣ ಮಾರ್ಲ, ಓಂ ಪ್ರಕಾಶ್ ಶೆಟ್ಟಿ, ಪ್ರದೀಪ್ ಶೆಟ್ಟಿ ಐಕಳ ಬಾವ, ವಾಮನ್ ಸಾಲ್ಯಾನ್, ರತ್ನಾಕರ ಶೆಟ್ಟಿ, ಬಾಸ್ಕರ ಶೆಟ್ಟಿ ಏಳಿಂಜೆ, ತಾರಾನಾಥ ಶೆಟ್ಟಿ ಐಕಳ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ರಜನಿ ಸಿ. ಭಟ್ ರವರನ್ನು ಕಂಬಳ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ದ.ಕ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ರವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಗೌರವಿಸಿದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ತುಳುನಾಡಿನ ಅಪ್ರತಿಮ ಸಾಧಕ ವಾಮನ್ ಸಾಲ್ಯಾನ್, ಬಾಲ ಪ್ರತಿಭೆ ಸ್ವಾತಿ ಪ್ರವೀಣ್ ಸಾಲ್ಯಾನ್, ಅನಂದ ಕೊಳಕೆ ಇರ್ವತ್ತೂರು ರವರನ್ನು ಗೌರವಿಸಲಾಯಿತು.
ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ, ಶ್ರೀಶ, ಸರಾಫ್ ಐಕಳ ಉಪಸ್ಥಿತರಿದ್ದರು.
ಶರತ್ ಶೆಟ್ಟಿ ನಿರೂಪಿಸಿದರು.
ಬಳಿಕ ಕಂಬಳ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ನಡೆಯಿತು. ಸುಮಾರು 150ಕ್ಕೂ ಹೆಚ್ಚು ಜೊತೆ ಕೋಣಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.