ಅದಾನಿ ಫೌಂಡೇಷನ್ : ಅದಾನಿ ಉಡುಪಿ ಸ್ಥಾವರದ ಪರಿಸರದ 846 ವಿದ್ಯಾರ್ಥಿಗಳಿಗೆ ಒಟ್ಟುರೂ. 20 ಲಕ್ಷ ವಿದ್ಯಾರ್ಥಿವೇತನ ವಿತರಣೆ (Adani Foundation : Total Rs. 20 lakh scholarship distribution to 846 students from Adani Udupi plant area)

ಅದಾನಿ ಫೌಂಡೇಷನ್ : ಅದಾನಿ ಉಡುಪಿ ಸ್ಥಾವರದ ಪರಿಸರದ 846 ವಿದ್ಯಾರ್ಥಿಗಳಿಗೆ ಒಟ್ಟುರೂ. 20 ಲಕ್ಷ ವಿದ್ಯಾರ್ಥಿವೇತನ ವಿತರಣೆ
ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಶಿಕ್ಷಣವು ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿದೆ : ಕಿಶೋರ್ ಆಳ್ವ
(Padubidri) ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುತ್ತಿರುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಶನ್‌ನ ವತಿಯಿಂದ ಭಾನುವಾರ ಪಡುಬಿದ್ರಿಯ ಬಂಟರ ಭವನದ ಸಭಾಂಗಣದಲ್ಲಿ ಸ್ಥಾವರದ ಸುತ್ತಮುತ್ತಲಿನ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಲೆಸಿರುವ 846 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆಒಟ್ಟು ರೂ. 20 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ವಿದ್ಯಾರ್ಥಿವೇತನ ವಿತರಣೆಯ ಸಭಾ ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಅವರು ಮಾತನಾಡಿ, ಅದಾನಿ ಯುಪಿಸಿಎಲ್ ಸಂಸ್ಥೆಯ ಸಿಎಸ್‌ಆರ್ ಯೋಜನೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿ ಶಿಕ್ಷಣದ ಮಹತ್ವದ ಅರಿವನ್ನು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅದಾನಿ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾರ್ಥಿವೇತನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆಯಾಗಿದೆ ಹಾಗೂ ವಿದ್ಯಾರ್ಥಿವೇತನ ವಿತರಣೆ ಯೋಜನೆ ಸಾರ್ಥಕವಾಗಿದೆ. ಇದುಒಂದು ವಿದ್ಯಾರ್ಥಿ ಸ್ನೇಹ ಹಾಗೂ ಭಾವನಾತ್ಮಕ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಮುನ್ನುಡಿ ನುಡಿದ ಅದಾನಿ ಪವರ್ ಲಿಮಿಟೆಡ್‌ನ ಅಧ್ಯಕ್ಷ ಕಿಶೋರ್ ಆಳ್ವ, ಅದಾನಿ ಫೌಂಡೇಶನ್‌ನ ಸಹಯೋಗದೊಂದಿಗೆ ಸಿಎಸ್‌ಅರ್ ಯೋಜನೆಯಡಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕ್ಷೇತ್ರದಲ್ಲಿ ಸಮಾಜ ಮುಖಿ ಕೆಲಸಗಳನ್ನು ಪ್ರತಿ ವರ್ಷವೂ ಹಮ್ಮಿಕೊಂಡು ಬರುತ್ತಿದ್ದು, ಇಂದು ಶಿಕ್ಷಣ ಕ್ಷೇತ್ರದಲ್ಲಿ ಸ್ಥಾವರದ ಸುತ್ತಮುತ್ತಲಿನ 12 ಗ್ರಾಮ ಪಂಚಾಯತ್‌ಗಳಲ್ಲಿ ವಾಸಿಸುತ್ತಿರುವ 846 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆಒಟ್ಟು ರೂ.20 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
2023-24 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸ್ಥಾವರದ ನೆರೆ ಪಂಚಾಯತ್‌ಗಳ ಮುಖೇನ ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ಆಳ್ವ ಅವರು ಹೇಳಿದರು.
ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಶಿಕ್ಷಣವು ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಒಂದಾಗಿದೆ. ಆದರೆ ದುರದೃಷ್ಟವಶಾತ್, ಇದು ಹೆಚ್ಚಾಗಿ ಆರ್ಥಿಕ ಅಡೆತಡೆಗಳೊಂದಿಗೆ ಒಳಪಟ್ಟಿದೆ. ವಿದ್ಯಾರ್ಥಿವೇತನಗಳು ಆ ಅಡೆ ತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿ ವೇತನವು ಕೇವಲ ಆರ್ಥಿಕ ನೆರವಷ್ಟೇಅಲ್ಲ, ಅವು ವಿದ್ಯಾರ್ಥಿಗಳಲ್ಲಿನ ಅವಕಾಶ, ಮಾನ್ಯತೆ ಮತ್ತು ಭರವಸೆಗಳನ್ನು ಪ್ರತಿನಿಧಿಸುತ್ತದೆ. ವಿದ್ಯಾರ್ಥಿ ವೇತನದಿಂದ ಓದುವ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸುವುದರ ಜೊತೆಗೆ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಾತ್ಮಕ ಪ್ರಕ್ರಿಯೆಯ ಚಿಂತನೆ ಮಾಡಲು ಅನುವು ಮಾಡಿಕೊಡುತ್ತದೆ.
ಅದಾನಿ ಉಡುಪಿ ಸ್ಥಾವರದಒಟ್ಟು ಸಿಎಸ್‌ಆರ್ ಅನುದಾನದಲ್ಲಿ ಶೇ. 16% ರಷ್ಟು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಲಾಗುತ್ತಿದೆ ಎಂದೂ ಆಳ್ವ ಹೇಳಿದರು.
ಮುಖ್ಯ ಅತಿಥಿಗಳಾಗಿ ಎಲ್ಲೂರು ಗ್ರಾಮ ಪಂಚಾಯತ್‌ಅಧ್ಯಕ್ಷ ರವಿರಾಜ್ ರಾವ್, ಬೆಳಪು ಗ್ರಾಮ ಪಂಚಾಯತ್‌ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್, ಬಳಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ಮಜೂರು ಗ್ರಾಮ ಪಂಚಾಯತ್‌ಅಧ್ಯಕ್ಷ ಪ್ರಸಾದ್ ಶೆಟ್ಟಿ, ಕುತ್ಯಾರು ಪಂಚಾಯತ್‌ಅಧ್ಯಕ್ಷ ಜನಾರ್ಧನ ಆಚಾರ್ಯ, ತೆಂಕ ಗ್ರಾಮ ಪಂಚಾಯತ್‌ಅಧ್ಯಕ್ಷೆ ಸುರೇಖ, ಪಲಿಮಾರು ಗ್ರಾಮ ಪಂಚಾಯತ್‌ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೇಮಚಂದ್ರ ಸಾಲಿಯನ್, ಅದಾನಿ ಫೌಂಡೇಶನ್‌ನ ಸಿಬ್ಬಂದಿ ವರ್ಗದವರಾದ ಅನುದೀಪ್, ಶುಭಮಂಗಳ, ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.
ಯುಪಿಸಿಎಲ್ ಕಂಪನಿಯ ಏಜಿಎಂ ರವಿ ಆರ್. ಜೇರೆ ಸ್ವಾಗತಿಸಿದರು.
ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.