# Tags
#PROBLEMS

ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ; ಹೋರಾಟಕ್ಕೆ ಸಜ್ಜಾದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ (Indrali railway bridge work delayed; National Highway Struggle Committee ready to fight)

ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ; ಹೋರಾಟಕ್ಕೆ ಸಜ್ಜಾದ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ

 ಫೆ.8ರಂದು ಸಮಾಲೋಚನಾ ಸಭೆ

(Udupi) ಉಡುಪಿ: ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ಹಾಗೂ ಅವ್ಯವಸ್ಥೆಯನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹೋರಾಟಕ್ಕೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಇದೇ ಫೆ.8ರಂದು ಸಂಜೆ 4 ಗಂಟೆಗೆ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪದ ಆವರಣದ ಜ್ಞಾನ ಮಂದಿರದಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.

ಈ ಕುರಿತು ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೋರಾಟ ಸಮಿತಿಯ ಅಮೃತ್ ಶೆಣೈ, ಹೋರಾಟ ಸಮಿತಿಯ ನೇತೃತ್ವದಲ್ಲಿ 2024ರ ಅಕ್ಟೋಬರ್ 29ರಂದು ಪ್ರತಿಭಟನಾ ಸಭೆ ನಡೆಸಿ 2025ರ ಜನವರಿ 30ರೊಳಗೆ ಕಾಮಗಾರಿ ಮುಗಿಸಿ ಚತುಷ್ಪಥ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಬೇಕೆಂದು ಗಡುವು ನೀಡಲಾಗಿತ್ತು. ಆದರೆ ಗಡುವು ಮುಗಿದರೂ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ, ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಸದ್ಯಕ್ಕೆ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮತ್ತೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಫೆ.8 ರಂದು ಸಮಾಲೋಚನೆ ಸಭೆ ಕರೆಯಲಾಗಿದೆ. ಸಭೆಯಲ್ಲಿ ಕೈಗೊಳ್ಳುವ ನಿರ್ಣಯದಂತೆ ಮುಂದಿನ ಹೋರಾಟ ನಡೆಸಲಾಗುವುದು ಎಂದರು.

ಪರ್ಕಳ, ಸಂತೆಕಟ್ಟೆ, ಆದಿಉಡುಪಿ, ಅಂಬಲಪಾಡಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಗಳ ವಿರುದ್ಧವೂ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ರಮೇಶ್ ಕಾಂಚನ್, ಸುರೇಶ್ ಶೆಟ್ಟಿ ಬನ್ನಂಜೆ, ಅನ್ಸರ್ ಅಹಮ್ಮದ್, ಕೀರ್ತಿ ಶೆಟ್ಟಿ, ಜ್ಯೋತಿ ಹೆಬ್ಬಾರ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3