# Tags
#ವಿಡಿಯೋ #ಸಂಘ, ಸಂಸ್ಥೆಗಳು

ಉಡುಪಿ : ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ದಿವ್ಯಾಂಗರ ಮಹೋತ್ಸವ (Udupi: “Divyangara  Mahotsav” at Kakkunje Anugraha Pallana Centre)

ಉಡುಪಿ : ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ದಿವ್ಯಾಂಗರ ಮಹೋತ್ಸವ

 (Udupi) ಉಡುಪಿ: ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ವತಿಯಿಂದ ಆಯೋಜಿಸಿದ್ದ ದಿವ್ಯಾಂಗರ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿದರು.

ಅವರು ಈ ಸಂದರ್ಭ ತಮ್ಮ ಆಶೀರ್ವಚನದಲ್ಲಿ, ದಿವ್ಯಾಂಗ ವ್ಯಕ್ತಿಗಳು  ಎಂದೂ ಕೂಡ ಸಮಾಜಕ್ಕೆ ಹೊರೆಯಲ್ಲ. ಅವರಲ್ಲಿ ಕೂಡ ಉತ್ತಮ ಪ್ರತಿಭೆಗಳಿದ್ದು, ಅದಕ್ಕೆ ಸೂಕ್ತ ಪ್ರೋತ್ಸಾಹ ಲಭಿಸಿದಾಗ ಅಂತಹ ವ್ಯಕ್ತಿಗಳು ಅತ್ಯುತ್ತಮವಾದ ಸಾಧನೆ ತೋರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಿವ್ಯಾಂಗರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.  

ದೈಹಿಕ ನ್ಯೂನ್ಯತೆಯಿಂದ ಬಳಲುತ್ತಿರುವ ದಿವ್ಯಾಂಗರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡುವಂತೆ ಈಗಾಗಲೇ ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಜಗತ್ತಿಗೆ ಕರೆ ನೀಡಿದ್ದಾರೆ. ಧರ್ಮಪ್ರಾಂತ್ಯ ಮಟ್ಟದಲ್ಲಿ ದಿವ್ಯಾಂಗ ಮಕ್ಕಳಿಗೆ ಕೂಡ ಉತ್ತಮ ಶಿಕ್ಷಣ ಪಡೆಯಲು ಹಾಗೂ ದಿವ್ಯಾಂಗರಿಗೆ ಸರಕಾರದಿಂದ ಲಭಿಸುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪಡೆಯನ್ನು ರಚಿಸಿದ್ದು, ಆ ಮೂಲಕ ದಿವ್ಯಾಂಗರು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬದಕುವಂತಹಾ ವ್ಯವಸ್ಥೆ ಆಗಬೇಕಾಗಿದೆ ಎಂದರು.

ಎಮ್ ಸಿ ಸಿ ಬ್ಯಾಂಕ್  ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವಕಾಶ ಕಲ್ಪಿಸಿಕೊಟ್ಟರೆ, ನಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸುತ್ತಾರೆ. ಆದರೆ ಪ್ರೋತ್ಸಾಹ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಅವರಲ್ಲಿರುವ ಪ್ರತಿಭೆ ನಾಶ ಹೊಂದುತ್ತಿದೆ. ವಿಶೇಷ ಅಗತ್ಯತೆಯುಳ್ಳವರು ನಮ್ಮೊಳಗೆ ಒಬ್ಬರು ಎಂಬ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಸಂವೇದನಾ ಶೀಲತಾ ಗುಣದಿಂದ ಮಾತ್ರ ಇಂತವರ ಏಳಿಗೆ ಸಾಧ್ಯ. ದಿವ್ಯಾಂಗರ ಏಳಿಗೆಗೆ ತಮ್ಮ ಸಂಸ್ಥೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದರು.

ದಿವ್ಯಾಂಗರಿಂದ ಧರ್ಮಾಧ್ಯಕ್ಷರಿಗೆ ಸನ್ಮಾನ

75 ವರ್ಷಗಳ ಹುಟ್ಟು ಹಬ್ಬ ಹಾಗೂ ಧರ್ಮಾಧ್ಯಕ್ಷರಾಗಿ 25 ವರ್ಷಗಳನ್ನು ಪೊರೈಸಿ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ದಿವ್ಯಾಂಗರು ಜೊತೆಯಾಗಿ ಸೇರಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ದಿವ್ಯಾಂಗರಿಗೆ ಧರ್ಮಾಧ್ಯಕ್ಷರು ಹಾಗೂ ಇತರ ಧರ್ಮಗುರುಗಳು ಶಾಲು ಹೊದಿಸಿ , ಗೌರವ ಕಾಣಿಕೆಯನ್ನು ನೀಡಿ ಗೌರವಿಸಿದರು.

  ಮಾನಸ ವಿಶೇಷ ಶಾಲೆಯ ಮಕ್ಕಳು ಹಾಗೂ ತೊಟ್ಟಂ ಚರ್ಚಿನ ಯುವಜನರು ತಮ್ಮ ನೃತ್ಯಗಳ ಮೂಲಕ, ವಂ. ಡೆನಿಸ್ ಡೆಸಾ ಅವರ ಗಾಯನದ ಮೂಲಕ ದಿವ್ಯಾಂಗರಿಗೆ ಹುರುಪನ್ನು ತುಂಬಿದರು.

ಕರ್ನಾಟಕ ಪ್ರಾಂತೀಯ ದಿವ್ಯಾಂಗರ ಆಯೋಗದ ಕಾರ್ಯದರ್ಶಿ ಎಸ್ತೆರ್ ಡಿಸೋಜಾ, ಅನುಗ್ರಹ ಪಾಲನಾ ಕೆಂದ್ರದ ನಿರ್ದೇಶಕ ಹಾಗೂ ಕಥೊಲಿಕ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಂ. ವಿನ್ಸೆಂಟ್ ಕ್ರಾಸ್ತಾ, ಕುಟುಂಬ ಆಯೋಗದ ನಿರ್ದೇಶಕ ವಂ. ಡಾ. ರೋಶನ್ ಡಿಸೋಜಾ, ಸಂಯೋಜಕಿ ಸಿಸ್ಟರ್ ವಿನ್ನಿ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ, ಆರೋಗ್ಯ ಆಯೋಗದ ನಿರ್ದೇಶಕ ಡಾ. ಎಡ್ವರ್ಡ್ ಲೋಬೊ, ಬೈಬಲ್ ಆಯೋಗದ ನಿರ್ದೇಶಕರಾದ ವಂ. ಸಿರಿಲ್ ಲೋಬೊ, ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ. ಆಲ್ವಿನ್ ಉಪಸ್ಥಿತರಿದ್ದರು.

ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಆರೋಜಾರವರು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Leave a comment

Your email address will not be published. Required fields are marked *

Emedia Advt3