ಉಡುಪಿ: ಕರಾವಳಿ ಸಹಿತ 12 ಜಿಲ್ಲೆಗಳ 300 ಕಾಲುಸಂಕಗಳಿಗೆ ಅನುದಾನ ಮಂಜೂರು- ಸಚಿವ ಜಾರಕಿಹೊಳಿ (Udupi: Funds sanctioned for 300 foot briges in 12 districts including the coastal areas – Minister Jarkiholi)

ಉಡುಪಿ: ಕರಾವಳಿ ಸಹಿತ 12 ಜಿಲ್ಲೆಗಳ 300 ಕಾಲುಸಂಕಗಳಿಗೆ ಅನುದಾನ ಮಂಜೂರು- ಸಚಿವ ಜಾರಕಿಹೊಳಿ
(Udupi) ಉಡುಪಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕರಾವಳಿ ಸೇರಿದಂತೆ 12 ಜಿಲ್ಲೆಗಳಿಗೆ 300 ಕಾಲುಸಂಕಗಳಿಗೆ ಅನುದಾನ ಮಂಜೂರು ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಐವರು ಶಾಸಕರು 500 ಕಾಲುಸಂಕಗಳಿಗೆ ಬೇಡಿಕೆ ಇಟ್ಟಿದ್ದು, ಉಡುಪಿಯೂ ಸೇರಿದಂತೆ ಎಲ್ಲಾ ಜಿಲ್ಲೆಗಳ ಕಾಲುಸಂಕಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದರು.
ಸರಕಾರದ ಗ್ಯಾರೆಂಟಿ ಯೋಜನೆಗಳಿಂದ ಲೋಕೋಪಯೋಗಿ ಇಲಾಖೆಗೆ ಯಾವುದೇ ಹಣಕಾಸಿನ ತೊಂದರೆ ಆಗಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಅನುದಾನವನ್ನು ನೀಡಲಿದ್ದೇವೆ. ಗ್ಯಾರೆಂಟಿಗೆ ಬಳಕೆಯಾಗುವ ಅನುದಾನ ಹಾಗು ಅಭಿವೃದ್ಧಿ ಕಾರ್ಯದ ಅನುದಾನ ಪ್ರತ್ಯೇಕವಿದೆ ಎಂದರು.
ಸದ್ಯಕ್ಕಂತೂ ಯಾವುದೇ ಸಮಾವೇಶ ಮಾಡುವ ಪ್ರಸ್ತಾವನೆ ಇಲ್ಲ- ಸಚಿವ ಜಾರಕಿಹೊಳಿ
ಪಕ್ಷದೊಳಗಿನ ವಿಚಾರವನ್ನು ಆಂತರಿಕವಾಗಿ ನಾವು ಈ ಕುರಿತು ಮಾತನಾಡಿ, ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳುತ್ತೇವೆ. ಸಮಸ್ಯೆ ಇಲ್ಲ ಅನ್ನೋದು ನಮ್ಮ ಭಾವನೆ, ನೋಡೋಣ ಅವರನ್ನೇ ಕೇಳುತ್ತೇನೆ ಏನು ಸಮಸ್ಯೆಯಾಗಿದೆ ತಿಳಿದುಕೊಳ್ಳೋಣ. ನೇರವಾಗಿ ನಾನೇ ಅವರನ್ನು ಕೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸಿಎಂ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಅವರ ಹೇಳಿಕೆಯ ಬಗ್ಗೆ ಸೋಮವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಅದು ನಮ್ಮ ಪಕ್ಷದ ಒಳಗೆ ಚರ್ಚೆ ಮಾಡಬೇಕಾದ ವಿಷಯ. ಡಿಕೆಶಿ ಮತ್ತು ರಾಜಣ್ಣ ಹೇಳಿಕೆಯ ಮಧ್ಯ ನಾನು ಬರಲು ಸಾಧ್ಯವಿಲ್ಲ. ಅವರವರ ಹೇಳಿಕೆಗಳಿಗೆ ಅವರೇ ಉತ್ತರ ಕೊಡಬೇಕು. ರಾಜಣ್ಣಗೆ ಸಿಟ್ಟು ಏನು ಇಲ್ಲ, ರಾಜಣ್ಣ ಇರೋದೆ ಹಾಗೆ ಎಂದರು.
ಭಿನ್ನರ ಸಮಾವೇಶದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿದ ಅವರು, ಸದ್ಯಕ್ಕಂತೂ ಯಾವುದೇ ಸಮಾವೇಶ ಮಾಡುವ ಪ್ರಸ್ತಾವನೆ ಇಲ್ಲ. ಭವಿಷ್ಯದಲ್ಲಿ ಮಾಡಬಹುದು. ಇದ್ದಾಗ ಎಲ್ಲ ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದೂ ಸಚಿವರು ಹೇಳಿದ್ದಾರೆ.