ಕಾಪು ಹೊಸಮಾರಿಗುಡಿ: ಹರಿದ್ವಾರದಲ್ಲಿ ಗಂಗಾಜಲಕ್ಕೆ ಪೂಜೆ (Kaup Hosamarigudi: Worship of Ganga water in Haridwar)

ಕಾಪು ಹೊಸಮಾರಿಗುಡಿ: ಹರಿದ್ವಾರದಲ್ಲಿ ಗಂಗಾಜಲಕ್ಕೆ ಪೂಜೆ
(Kaup) ಕಾಪು: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5 ರ ವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಹರಿದ್ವಾರದಲ್ಲಿ ಫೆಬ್ರವರಿ 12ರ ಕುಂಭ ಸಂಕ್ರಮಣದ ಹುಣ್ಣಿಮೆಯ ಪರ್ವಕಾಲದಲ್ಲಿ 9 ಬೃಹತ್ ಕೊಡಪಾನಗಳಿಂದ ನವಕುಂಭಗಳಲ್ಲಿ ಗಂಗಾಜಲವನ್ನು ತುಂಬಿಸಿ, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಯಿತು.
14ರ ಶುಕ್ರವಾರದಂದು ಬೆಳಿಗ್ಗಿನ ಜಾವ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಗಂಗಾಜಲ ಆಗಮಿಸಲಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ವಾಹನದ ಮೂಲಕ ಆಗಮಿಸಿ, ಶೋಭಾಯಾತ್ರೆಯ ಮೂಲಕ ಕಾಪು ಸಾವಿರ ಸೀಮೆಯ ಒಡೆಯ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿಧಾನದಲ್ಲಿ ಮುಂದಿನ 9 ದಿನ ವಿಶೇಷ ಪೂಜೆ ಸಲ್ಲಿಸಿ ತದನಂತರ ಅಮ್ಮನ ಸನ್ನಿಧಾನಕ್ಕೆ ತರಲಾಗುವುದು.
ಹರಿದ್ವಾರದಲ್ಲಿ ನಡೆದ ಪೂಜಾ ಸಂದರ್ಭ ಜೀರ್ಣೀದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ದಂಪತಿಗಳು, ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ದಂಪತಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಉದಯ ಸುಂದರ್ ಶೆಟ್ಟಿ ದಂಪತಿಗಳು, ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಒಂಬತ್ತು ಮಂದಿ ಉಪಸ್ಥಿತರಿದ್ದರು.