ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಹತ್ತು ಲಕ್ಷ ರೂ ಹಸ್ತಾಂತರ (Sri Chandrashekar Swamiji hands over Rs. 10 lakhs to the renovation fund of Punarur Sri Vishwanath Temple)

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶ್ರೀ ಚಂದ್ರಶೇಖರ ಸ್ವಾಮೀಜಿ ಹತ್ತು ಲಕ್ಷ ರೂ ಹಸ್ತಾಂತರ
ಪುನರೂರು: ದೇವಸ್ಥಾನಗಳ ಜೀರ್ಣೋದ್ದಾರ ಗ್ರಾಮದ ಅಭಿವೃದ್ಧಿಗೆ ಪೂರಕ – ಶ್ರೀ ಚಂದ್ರಶೇಖರ ಸ್ವಾಮೀಜಿ
(Mulki) ಮುಲ್ಕಿ: ಗ್ರಾಮೀಣ ಭಾಗದ ದೇವಸ್ಥಾನಗಳು ಧಾರ್ಮಿಕತೆಯಲ್ಲಿ ಮಹತ್ವ ಹೊಂದಿದ್ದು ದೇವಸ್ಥಾನಗಳ ಜೀರ್ಣೋದ್ದಾರ ಗ್ರಾಮದ ಅಭಿವೃದ್ಧಿಗೆ ಪೂರಕ ಎಂದು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು
ಅವರು ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಹತ್ತು ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.
ಶ್ರೀ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಪುರಾತನ ಕಾಲದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಕಾರಣಿಕ ನೆಲೆಯನ್ನು ಹೊಂದಿದ್ದು, ಭಕ್ತರ ಇಷ್ಟಾರ್ಥವನ್ನು ಈಡೇರಿಸುವ ಶ್ರೀ ವಿಶ್ವನಾಥ ದೇವರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರಿಸುವ ಮೂಲಕ ಊರ, ಪರವೂರ ಭಕ್ತರು, ದಾನಿಗಳು ಗ್ರಾಮಸ್ಥರು ಮಾದರಿಯಾಗಬೇಕು ಎಂದರು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಡಾ. ಹರಿಕೃಷ್ಣ ಪುನರೂರು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ದಾನಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಕೊಡುಗೆ ಅನನ್ಯವಾಗಿದ್ದು, ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆದು ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಜ್ಯೋತಿಷಿ ವಿಶ್ವನಾಥ ಭಟ್, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ. ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ್ ಕೃಷ್ಣ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪಟೇಲ್ ವಿಶ್ವನಾಥ ರಾವ್ , ಗೋಪಿನಾಥ ರಾವ್, ಪದ್ಮಶಾಲಿ ಮಹಾಸಭಾ ಅಧ್ಯಕ್ಷ ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಪುನೀತ್ ಕೃಷ್ಣ ಸ್ವಾಗತಿಸಿ, ನಿರೂಪಿಸಿದರು.