ಫರಂಗಿಪೇಟೆ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಪ್ರಕರಣ – 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ(Farangipet minor student missing case – found in Udupi after 12 days)

ಫರಂಗಿಪೇಟೆ ಅಪ್ರಾಪ್ತ ವಿದ್ಯಾರ್ಥಿ ನಾಪತ್ತೆ ಪ್ರಕರಣ – 12 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆ
(Udupi) ಉಡುಪಿ: ಫರಂಗಿಪೇಟೆಯಲ್ಲಿ ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿ 12 ದಿನಗಳ ಬಳಿಕ ಶನಿವಾರ ಉಡುಪಿಯಲ್ಲಿ (Udupi) ಪತ್ತೆಯಾಗಿದ್ದಾನೆ.
ಅಪ್ರಾಪ್ತ ವಿದ್ಯಾರ್ಥಿಯನ್ನು ದಿಗಂತ್ ಎಂದು ಗುರುತಿಸಲಾಗಿದ್ದು, ಫೆ.25 ರಂದು ಮಂಗಳೂರಿನ ಫರಂಗಿಪೇಟೆಯಿಂದ ನಾಪತ್ತೆಯಾಗಿದ್ದ.
ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ತೆರಳಿದ್ದ ದಿಗಂತ್ ಮನೆಗೆ ವಾಪಸ್ಸಾಗಿರಲಿಲ್ಲ. ವಿದ್ಯಾರ್ಥಿಗಾಗಿ ದಕ್ಷಿಣ ಕನ್ನಡ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಕಳೆದ 10 ದಿನಗಳಿಂದ ಹುಡುಕಾಟ ನಡೆಸಿದ್ದರೂ, ಕೂಡ ಪತ್ತೆಹಚ್ಚಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಬಾಲಕನ ಪತ್ತೆಗಾಗಿ ಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಶನಿವಾರ ಉಡುಪಿಯ ಡಿ-ಮಾರ್ಟ್‌ನಲ್ಲಿ ದಿಗಂತ್ ಪತ್ತೆಯಾಗಿದ್ದು, ಅಲ್ಲಿ ಬಟ್ಟೆಗಳನ್ನು ಬ್ಯಾಗ್‌ಗೆ ತುಂಬಿಕೊಳ್ಳುತ್ತಿದ್ದಾಗ ಸಂಶಯಕ್ಕೊಳಗಾದ ಡಿ-ಮಾರ್ಟ್ ಸಿಬ್ಬಂದಿ ಆತನನ್ನು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಗಂತ್‌ನ ಫೊಟೋ ನೋಡಿದ್ದ ಅಲ್ಲಿ ಸಿಬ್ಬಂದಿ ವಿಚಾರಣೆ ನಡೆಸಿದಾಗ ತಾನು ದಿಗಂತ್ ಎಂದು ಒಪ್ಪಿಕೊಂಡಿದ್ದಾನೆ. ಇದೇ ವೇಳೆ ಸಿಬ್ಬಂದಿಯ ಮೊಬೈಲ್‌ನಿಂದ ತಾಯಿಗೆ ಕರೆ ಮಾಡಿದ್ದಾನೆ.
ಪ್ರಕರಣ ಸಂಬಂಧ ದಿಗಂತ್ ತಾಯಿ ಮಾತನಾಡಿ, ದಿಗಂತ್ ತಮಗೆ ಕರೆ ಮಾಡಿ, ತಾನು ಉಡುಪಿಯ ಡಿಮಾರ್ಟ್‌ನಲ್ಲಿದ್ದೇನೆಂದು ತಿಳಿಸಿದ್ದಾನೆ. ನನಗೇನು ತೊಂದರೆಯಾಗಿಲ್ಲ. ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ. ನಾನು ನಾಪತ್ತೆಯಾಗುವ ಹುಡುಗ ಅಲ್ಲ. ಎಲ್ಲವನ್ನೂ ಮನೆಗೆ ಬಂದು ಹೇಳುತ್ತೇನೆ ಎಂದಿದ್ದಾನೆ ಎಂದರು.
ದಿಗಂತ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ದಕ್ಷಿಣ ಕನ್ನಡ ಪೊಲೀಸರು ಉಡುಪಿಗೆ ತೆರಳಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಪರೀಕ್ಷೆಗೆ ಹೆದರಿ ದಿಗಂತ್ ಮನೆ ಬಿಟ್ಟು ಹೋಗಿದ್ದು, ಇಲ್ಲಿ ಹಿಂದೂ ಪರ ಸಂಘಟನೆಗಳು ದಿಗಂತ್ ನಾಪತ್ತೆ ಆದ ಬಗ್ಗೆ ಬೃಹತ್ ಪ್ರತಿಭಟನೆಯ ಯೋಜನೆ ಹಾಕಿ ಕೊಂಡಿದ್ದರು. ದಿಗಂತ್ ಉಡುಪಿಯಲ್ಲಿ ಪತ್ತೆ ಆದುದರಿಂದ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಸದ್ಯ ಬಾಲಕನ ವಿಚಾರಣೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್.ಎನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಲಕನ ನಾಪತ್ತೆ ಬಳಿಕ ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ 7 ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು. ಕಾಣೆಯಾಗಿದ್ದ ದಿಗಂತ್ ಶುಕ್ರವಾರ ಉಡುಪಿಯಲ್ಲಿ ಪತ್ತೆಯಾಗಿದ್ದ. ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ಹೊರ ಬಂದಿದೆ.
ಮಾ.3 ರಿಂದ ದ್ವಿತೀಯ ಪಿಯುಸಿ ಫೈನಲ್ ಎಕ್ಸಾಂ ಇರೋ ಹಿನ್ನಲೆಯಲ್ಲಿ ಹೆದರಿರುವ ಬಗ್ಗೆ ಹೇಳಿದ್ದಾನೆ. ಪರೀಕ್ಷೆಗೆ ಸರಿಯಾದ ತಯಾರಿ ಮಾಡದೇ ಇರುವುದರಿಂದ ಹೆದರಿ ನಾಪತ್ತೆಯಾಗಿದ್ದ ಎಂದು ತಿಳಿಸಿದರು.