ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಗೆ ಬೇಕಿದೆ ಕಾಯಕಲ್ಪ (Byndoor’s Harmannu Link Bridge needs a makeover)

ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಗೆ ಬೇಕಿದೆ ಕಾಯಕಲ್ಪ
ಚಿತ್ರ, ವಿಡಿಯೋ ಕೃಪೆ: ಶ್ರೀಕರ ಕುಂದಾಪುರ
(Kundapura) ಕುಂದಾಪುರ : ಬೈಂದೂರಿನ ಹರ್ಮಣ್ಣು ಸಂಪರ್ಕ ಸೇತುವೆಯು ಅತ್ಯಂತ ಶಿಥಿಲ ಗೊಂಡಿದ್ದು, ಕಾಯಕಲ್ಪಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೇತುವೆ ದುರ್ಬಲಗೊಂಡು ಸೇತುವೆಯಲ್ಲಿನ ಪಯಣ ಎದೆ ಝಲ್ಲೆನಿಸುತ್ತಿದೆ. ಪ್ರತಿದಿನ ಈ ಪರಿಸರದ ಜನರು ಶಾಲಾ ಮಕ್ಕಳು ಅಗಲ ಕಿರಿದಾಗಿ ದುರ್ಬಲಗೊಂಡಿರುವ ಸೇತುವೆಯಲ್ಲಿ ಪಯಣಿಸುತ್ತಿದ್ದಾರೆ.
ಸೇತುವೆ ಜೋಡಿಸುವ ಮಣ್ಣಿನ ಹಾದಿಯೂ ಅತ್ಯಂತ ಕುಲಗೆಟ್ಟಿದ್ದು, ದಶಕಗಳಿಂದ ಸಂಕಷ್ಟದಲ್ಲಿ ದಿನ ಕಳೆಯುತ್ತಿರುವ ಇಲ್ಲಿನ ಜನರ ಗೋಳಿಗೆ ಕೊನೆಯಿಲ್ಲ ಎಂಬಂತಾಗಿದೆ.
ಆಜ್ರಿ ಗ್ರಾಮದ ಬಾಂಡ್ಯ ಮತ್ತು ಬೆಳ್ಳಾಲ ಗ್ರಾಮವನ್ನು ಜೋಡಿಸುವ ಹರ್ಮಣ್ಣು ಸಂಪರ್ಕ ಕಲ್ಪಿಸುವ ಸೇತುವೆ ಅಪಾಯ ಸ್ಥಿತಿಯಲ್ಲಿದೆ.
ಚಕ್ರ ನದಿಗೆ ಅಡ್ಡಲಾಗಿ ಎರಡು ದಶಕದ ಹಿಂದೆ ನಿರ್ಮಿಸಲಾದ ಈ ಸೇತುವೆ ಗಾರ್ಡ್‌ಗಳು ಮುರಿದು ನದಿಗೆ ಬಿದ್ದಿದೆ. ಸೇತುವೆಯ ಪಿಲ್ಲರ್ ಅಭದ್ರ ಗೊಂಡಿದೆ. ಮಳೆಗಾಲದಲ್ಲಿ ತೇಲಿ ಬಂದ ಮರಮಟ್ಟುಗಳು ಸೇತುವೆಗೆ ಬಡಿದು ಅಲ್ಲಲ್ಲಿ ಹಾನಿಗೊಂಡಿದೆ. ಅಗಲ ಕಿರಿದಾದ ಸೇತುವೆಯಲ್ಲಿ ನಾಗರಿಕರು ಜೀವ ಕೈಯಲ್ಲಿ ಹಿಡಿದು ಪಯಣಿಸ ಬೆಳೆಸಬೇಕಿದೆ.
ಪ್ರಸ್ತುತ ಬೆಳ್ಳಾಲ, ಹರ್ಮಣ್ಣು ಪ್ರದೇಶದ ಮಕ್ಕಳು ಶಾಲೆಗೆ ಈ ಸೇತುವೆಯ ಮೂಲಕ ಬಾಂಡ್ಯಕ್ಕೆ ಬರಬೇಕಿದೆ. ಆಟೋರಿಕ್ಷಾ ಕೂಡ ಸಾಗದ ಸೇತುವೆಯಲ್ಲಿ ಮಕ್ಕಳನ್ನು ದಾಟಿಸಲು ಹೆತ್ತವರು ಕೆಲಸ ಕಾರ್ಯ ಬಿಟ್ಟು ಬರುವುದು ಅನಿವಾರ್ಯವಾಗಿದೆ.
ಕೃಷಿ ಪದಾರ್ಥ, ಪಡಿತರ ಇನ್ನಿತರ ವಸ್ತು ತರುವುದು, ಕೊಂಡೊಯ್ಯುವುದೇ ಸಾಹಸ ಎನಿಸಿದೆ. ಅನಾರೋಗ್ಯ ಕಾಡಿದರೆ ಪ್ರಾಣವೇ ಕಳೆದುಕೊಳ್ಳುವ ಸ್ಥಿತಿ ಬಂದೊದಗಿದೆ.