# Tags
#ಪ್ರಚಲಿತ

ಶೋಷಿತ ಸಮಾಜಕ್ಕೆ ಸಾಮಾಜಿಕ ಶಕ್ತಿಯನ್ನು ನೀಡಿದವರು ಸಂತ ಸೇವಾಲಾಲರು : ಸಂಸದ ಕೋಟ  (Saint Sevalal was the one who gave social power to the exploited society: MP Kota)

ಶೋಷಿತ ಸಮಾಜಕ್ಕೆ ಸಾಮಾಜಿಕ ಶಕ್ತಿಯನ್ನು ನೀಡಿದವರು ಸಂತ ಸೇವಾಲಾಲರು : ಸಂಸದ ಕೋಟ  

 ಉಡುಪಿ ಜಿಲ್ಲಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಣೆ

(Udupi) ಉಡುಪಿ : ಸಮಾಜದ ನೂನ್ಯತೆಗಳನ್ನು ಗುರುತಿಸಿ, ಸಮಾಜವನ್ನು ಒಟ್ಗಾಗಿಸುವುದರ ಮೂಲಕ ಶೋಷಿತ ಸಮಾಜಕ್ಕೆ ಸಾಮಾಜಿಕ ಶಕ್ತಿಯನ್ನು ನೀಡಿದವರು ಸಂತ ಸೇವಾಲಾಲರು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ್ ಬಂಜಾರ ಸಂಘ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾನತೆಯ ಬದುಕಿಗೆ ಹೆಚ್ಚು ಮಹತ್ವ ನೀಡಿ ಬಂಜಾರ ಸಮುದಾಯದ ಉನ್ನತಿಗಾಗಿ ಹೋರಾಡಿದ ಮಹಾನ್ ಸಂತ ಸೇವಲಾಲರು. ಅಧೋಗತಿಯಲ್ಲಿರುವ ಸಮಾಜದ ಏಳಿಗೆಗಾಗಿ ಪ್ರತಿಯೊಂದು ಸಮುದಾಯದಲ್ಲೂ ಜನ್ಮ ತಾಳಿದ ಅದೇಷ್ಟೋ ಮಹಾಪುರುಷರ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಸೇವಲಾಲ್ ಕೂಡ ತನ್ನ ಸಮಾಜವನ್ನು ದಾರ್ಶನಿಕರಾಗಿ, ಸಂತರಾಗಿ, ಚಿಂತಕರಾಗಿ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ಸಮುದಾಯವನ್ನು ಒಗ್ಗೂಡಿಸಿ ಹಕ್ಕುಗಳ ಹೋರಾಟಕ್ಕಾಗಿ ಪ್ರೇರಿಪಿಸಿದವರು ಸಂತ ಸೇವಾಲಾಲರು. ಅವರ ತ್ಯಾಗ, ಚಿಂತನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಸರ್ಕಾರವು ಜಯಂತಿ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದು, ಸಮುದಾಯದ ಶಕ್ತಿ, ಆತ್ಮವಿಶ್ವಾಸ ಹೆಚ್ಚಿಸಿ ಅವರು ಏಳಿಗೆ ಹೊಂದುವಲ್ಲಿ ಸೇವಾಲಾಲರ ಕೊಡುಗೆ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷ್ಣ ನಗರಿ ಸಂತ ಶ್ರೀ ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ಕುಮಾರ್ ಕೆ.ಎಂ ಮಾತನಾಡಿ, ಪ್ರಸ್ತುತವಾಗಿ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೇವಾಲಾಲರು ಹಾಕಿಕೊಟ್ಟ ಅಡಿಪಾಯದ ಕೆಲವು ಉಪದೇಶಗಳನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.

 ಕಾಪುವಿನ ಕಳತ್ತೂರು ಪಿ.ಕೆ.ಎಸ್ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಗಂಗಾ ನಾಯ್ಕ್ ಎಲ್, ಸಂತ ಸೇವಾಲಾಲ ಹಾಗೂ ಬಂಜಾರ ಸಮುದಾಯದ ಆಚಾರ – ವಿಚಾರಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಾಕಪ್ಪ ಲಮಾಣಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿ ಕಛೇರಿಯ ಸಿಬ್ಬಂದಿಗಳು ಹಾಗೂ ಸೇವಾಲಾಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

Emedia Advt3