ಹೆಜಮಾಡಿ ಟೋಲ್ ಗೇಟ್ : ಬಸ್ಸು ಮಾಲಕರ ಸಾಂಕೇತಿಕ ಪ್ರತಿಭಟನೆ (Hejamadi Toll Gate: Bus owners hold symbolic protest)

ಹೆಜಮಾಡಿ ಟೋಲ್ ಗೇಟ್: ಬಸ್ಸು ಮಾಲಕರ ಸಾಂಕೇತಿಕ ಪ್ರತಿಭಟನೆ
(Padubidri) ಪಡುಬಿದ್ರಿ: ಬಸ್ಸುಗಳಿಗೆ ಅವೈಜ್ಞನಿಕವಾಗಿ ಟೋಲ್ ಕಡಿತವಾಗುತ್ತಿದೆ. ಇದನ್ನು ಎರಡು ದಿನಗಳೊಳಗಾಗಿ ಸ್ಪಂದಿಸದಿದ್ದರೆ, ತೀವ್ರವಾಗಿ ಪ್ರತಿಭಟಿಸಿ ಶಕ್ತಿ ಪ್ರದರ್ಶನ ಮಾಡುವುದಾಗಿ ಬಸ್ಸು ಮಾಲಕರು ಎಚ್ಚರಿಸಿದ್ದಾರೆ.
ಕೆನರಾ ಬಸ್ಸು ಮಾಲಕರ ಸಂಘ ಹಾಗೂ ಕರಾವಳಿ ಬಸ್ಸು ಮಾಲಕರ ಸಂಘದ ಸದಸ್ಯರು ಬುಧವಾರ ಹೆಜಮಾಡಿ ಟೋಲ್ ಗೇಟ್‌ನಲ್ಲಿ ಹಗಲು ದರೋಡೆ ವಿರುದ್ಧ ಸಾಂಕೇತಿಕವಾಗಿ ಪ್ರತಿಭಟಿಸಿ ಟೋಲ್ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ತಮ್ಮ ಮಿನಿ ಬಸ್‌ಗಳಿಗೆ ಘನ ವಾಹನಗಳ ಟೋಲನ್ನು ಕಡಿತಗೊಳಿಸಲಾಗುತ್ತಿದ್ದು, ಅವೈಜ್ಞಾನಿಕವಾಗಿರುವ ಈ ತಂತ್ರವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಜೇವಲ ಎರಡು ದಿನಗಳ ಬಳಿಕ ಬಸ್ಸುಗಳನ್ನೆಲ್ಲಾ ಟೋಲ್ ಗೆ ಅಡ್ಡವಾಗಿರಿಸಿ ತೀವ್ರ ತರಹದ ಪ್ರತಿಭಟನೆಯನ್ನು ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮಿನಿ ಬಸ್ಸುಗಳಿಗೆ ಹೆವಿ ವೆಹಿಕಲ್‌ಗಳ ಟೋಲ್ ವಸೂಲಿ ಮಾಡುತ್ತಿದ್ದಾರೆ. ಇಂದಿನದು ಸಾಂಕೇತಿಕ ಪ್ರತಿಭಟನೆಯಾಗಿದೆ. ಫಾಸ್ಟ್‌ಟ್ಯಾಗ್ ಮೊತ್ತದ ಹೊರತಾಗಿಯೂ ಮತ್ತೆ ತಮಗೆ ಬರೆ ಬೀಳುತ್ತಿದೆ. ದೇಶದ ಯಾವೆಡೆಯಲ್ಲೂ ಇಲ್ಲದ ಪರಿಸ್ಥಿತಿ ಇಲ್ಲಿದೆ. ನಮ್ಮಲ್ಲಿ 2000 ಬಸ್ಸುಗಳಿವೆ. ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಟೋಲ್ ಗೇಟ್ ಬಂದ್ ಮಾಡುವ ಪ್ರತಿಭಟನೆಯನ್ನು ಮಾಡಲಿರುವುದಾಗಿ ದಿಲ್‌ರಾಜ್ ಆಳ್ವ ಹೇಳಿದರು.
ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ, ಹೆಜಮಾಡಿ, ಸಾಸ್ತಾನ, ಶಿರೂರುಗಳಲ್ಲಿ ತಮ್ನ ಒಂದು ಬಸ್‌ನಿಂದ ದಿನಕ್ಕೆ 700 ರೂ. ನಷ್ಟು ಟೋಲ್ ಹೆಸರಲ್ಲಿ ಸೋರಿಕೆಯಾಗುತ್ತಿದೆ. ವಾರದೊಳಗಾಗಿ ಸ್ಪಂದಿಸದಿದ್ದರೆ, ಟೋಲ್ ಮುಚ್ಚುವ ಒಂದು ದಿನದ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, ಟೋಲ್ ಗೇಟಿನಲ್ಲಿ ಹಗಲು ದರೋಡೆಯಾಗುತ್ತಿದೆ. ಇದನ್ನು ನಿಲ್ಲಿಸದಿದ್ದರೆ, ಬಸ್ಸುಗಳ ಓಡಾಟವನ್ನೇ ನಿಲ್ಲಿಸುವೆವು.
ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಇಲ್ಲ. ಎಲ್ಲಾ ಸಮಸ್ಯೆ ಪರಿಹರಿಸಬೇಕು. ಸದ್ಯ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಎಚ್ಚರಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಟೋಲ್ ಅಧಿಕಾರಿ ತಿಮ್ಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಬಸ್ ಮಾಲಕರಾದ ಜೀವಂದರ್ ಬಲ್ಲಾಳ್, ರಝಾಕ್ ಮತ್ತು ನೂರಾರು ಮಂದಿ ಉಪಸ್ಥಿತರಿದ್ದರು.