ಉಚ್ಚಿಲ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್ ರಕ್ತದಾನ ಶಿಬಿರ (Massive blood donation camp by Uchilla Civil Fight Committee)

ಉಚ್ಚಿಲ ನಾಗರಿಕ ಹೋರಾಟ ಸಮಿತಿಯಿಂದ ಬೃಹತ್ ರಕ್ತದಾನ ಶಿಬಿರ
ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್. ರಕ್ತದಾನ
(Uchila) ಉಚ್ಚಿಲ : ಭಾರತದಲ್ಲಿ ಇಂದು ರಕ್ತದ ಅವಶ್ಯಕತೆ ಇದೆ. ರಕ್ತದಾನ ಮಾಡಿದಾಗ ಆತ್ಮ ಸಂತೋಷದ ಭಾವ ಉಂಟಾಗುತ್ತದೆ. ರಕ್ತದಾನವು ಉಪಕಾರದ ಜೊತೆಗೆ ಸ್ವಂತ ಆರೋಗ್ಯದ ವೃದ್ಧಿಗೂ ಸಹಕಾರಿಯಾಗಿದೆ. ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಕಾರ್ಯ ಶ್ಲಾಘನೀಯ ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಹೇಳಿದರು.
ಅವರು ಉಚ್ಚಿಲ ನಾಗರಿಕ ಹೋರಾಟ ಸಮಿತಿ ಹಾಗೂ ಬ್ಲಡ್ ಬ್ಯಾಂಕ್ ಕೆ.ಎಂ.ಸಿ. ಮಣಿಪಾಲ ಇದರ ಜಂಟಿ ಆಶ್ರಯದಲ್ಲಿ ಉಚ್ಚಿಲದ ಐಕಾನ್ ಪ್ಲಾಝಾದಲ್ಲಿ ಜರಗಿದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶ್ರೀ ಕಿಣಿ ಮಾತನಾಡಿ, ಜುಲೈನಿಂದ ಸೆಪ್ಟೆಂಬರ್ ತಿಂಗಳವರೆಗೆ ಕಾಡುವ ಡೆಂಗ್ಯು, ಮಲೇರಿಯಾ ಜ್ವರದ ಸಮಯದಲ್ಲಿ ರಕ್ತ ಕಣಗಳ ಅವಶ್ಯಕತೆ ಇದೆ. ಆ ಸಮಯದಲ್ಲಿ ಇಂತಹ ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ನಡೆಸಬೇಕಿದೆ. ಹಲವು ಜೀವಗಳನ್ನು ಉಳಿಸುವ ಕಾರ್ಯ ರಕ್ತದಾನದಿಂದ ಆಗುತ್ತದೆ. ಆ ನಿಟ್ಟಿನಲ್ಲಿ ರಕ್ತದಾನ ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚಿಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷರಾದ ಸಿರಾಜ್ ಎನ್.ಎಚ್. ವಹಿಸಿದ್ದರು.
20 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್. ರಕ್ತದಾನ ಮಾಡಿದರು. ಸುಮಾರು 100 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.
ಈ ಸಂದರ್ಭ ಉಚ್ಚಿಲ ರೋಟರಿ ಅಧ್ಯಕ್ಷರಾದ ಇಬಾದುಲ್ಲಾ, ಕೆ.ಎಂ.ಸಿ. ಮಣಿಪಾಲದ ವೈದ್ಯ ದೀಪು, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಪಿ.ಎಸ್., ಉಚ್ಚಿಲದ ಖ್ಯಾತ ವೈದ್ಯ ಡಾ. ಗಂಗಾಧರ ಶೆಟ್ಟಿ, ಉದ್ಯಮಿಗಳಾದ ಯುಸಿ ಶೇಖಬ್ಬ, ವೇದವ್ಯಾಸ ಬಂಗೇರ, ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಕಾರ್ಯದರ್ಶಿ ಸುಕುಮಾರ್ ಉಪಸ್ಥಿತರಿದ್ದರು.
ಸಿರಾಜ್ ಎನ್.ಎಚ್. ಸ್ವಾಗತಿಸಿದರು. ಝುನೈದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.