ಕಾರ್ಕಳ: ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ‘ಕಾಂಗ್ರೆಸ್ ಕುಟುಂಬೋತ್ಸವ’ (Karkala: Karkala, Hebri Block Congress hosts ‘Congress Kutumbotsava’)

ಕಾರ್ಕಳ: ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ‘ಕಾಂಗ್ರೆಸ್ ಕುಟುಂಬೋತ್ಸವ’
(Karkala) ಕಾರ್ಕಳ ; ಉಡುಪಿ, ದ. ಕ. ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಾನ್ವಿತ ಯುವಜನರು ದೂರ ಬೆಂಗಳೂರು, ಮುಂಬಯಿ, ದುಬಾಯಿಗೆ ಉದ್ಯೋಗಕ್ಕೆ ವಲಸೆ ಹೋಗುತ್ತಿದ್ದು, ಸ್ಥಳೀಯವಾಗಿ ಇವರಿಗೆ ಉದ್ಯೋಗಾವಕಾಶ ಕಲ್ಪಿಸುವ ಆಶಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತ್ಯೇಕ ನೀತಿ ರಚನೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದರು.
ಕಾರ್ಕಳದಲ್ಲಿ ರವಿವಾರ ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಜರಗಿದ ‘ಕಾಂಗ್ರೆಸ್ ಕುಟುಂಬೋತ್ಸವ ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಜಾತಿ, ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ, ಉದ್ಯೋಗ ಖಾತ್ರಿ ಯೋಜನೆಗಳನ್ನು ಈ ದೇಶದ ಬಡ ಜನರ ಕಲ್ಯಾಣಕ್ಕೆ ಜಾರಿಗೆ ತಂದಿದೆ. ಅಭಿವೃದ್ಧಿ ಮತ್ತು ಜನರ ಕಲ್ಯಾಣವನ್ನು ಕಾಂಗ್ರೆಸ್ ಮೊದಲ ಆಧ್ಯತೆಯಾಗಿ ಪರಿಣಮಿಸಿ ಇಲ್ಲಿಯವರೆಗೆ ಕೆಲಸ ಮಾಡಿದೆ. ಮುಂದೆಯೂ ಕರಾವಳಿಯಲ್ಲಿ ಉದ್ಯೋಗಾವಕಾಶ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತದೆ ಎಂದರು.
ಇಲ್ಲಿನ ಪ್ರತಿಭಾ ಪಲಾಯನ ತಪ್ಪಿಸಲು ಸಂಬಂಧಪಟ್ಟ ಸಚಿವರ ಜೊತೆಗೆ ಚರ್ಚಿಸಿ ಈ ಬಗ್ಗೆ ರೂಪುರೇಶ ತಯಾರಿಸಿ, ಪ್ರತ್ಯೇಕ ನೀತಿ ಜಾರಿಗೊಳಿಸಲಾಗುವುದು. ಬಿಜೆಪಿ ಏನು ಮಾಡಿದರೂ ಟೀಕೆ ಮಾಡುತ್ತ ಕಾಲಹರಣ ಮಾಡುತ್ತಿದೆ. ನಮ್ಮ ಕಾರ್ಯಕರ್ತರು ಇದಕ್ಕೆ ಕಿವಿಗೊಡದೇ ಮುಂಬರುವ ಎಲ್ಲ ಚುನಾವಣೆಗೆ ಇಂದಿನಿಂದಲೇ ತಯಾರಿ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಬೂತ್‌ಮಟ್ಟದಿಂದ, ವಿಧಾನ ಸಭಾ ಕ್ಷೇತ್ರ, ಜಿಲ್ಲಾ ಮಟ್ಟದ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯಾಧ್ಯಂತ ಕಾರ್ಕಳ ಕುಟುಂಬೋತ್ಸವ ಮಾದರಿಯಲ್ಲೇ ಬಹಿರಂಗ ಸಭೆ ನಡೆಸಿ ಸಂಘಟನೆ ಕಾರ್ಯ ಚುರುಕುಗೊಳಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಡಿ. ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಕರಾವಳಿಯಲ್ಲಿ ಕಾಂಗ್ರೆಸ್ ಇತಿಹಾಸದಂತೆ ಮತ್ತಷ್ಟು ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಅಭಯಚಂದ್ರ ಜೈನ್, ಪ್ರಮುಖರಾದ ಮಿಥುನ್ ರೈ, ರಕ್ಷಿತೆ ಶಿವರಾಮ್ , ಜಿ. ಎ. ಬಾವ, ನೀರೆ ಕೃಷ್ಣ ಶೆಟ್ಟ, ಮಂಜುನಾಥ ಪೂಜಾರಿ, ಎಂ. ಎ. ಗಫೂರ್, ಸುರೇಂದ್ರ ಶೆಟ್ಟಿ, ರಮೇಶ್ ಕಾಂಚನ್ , ಪ್ರಸಾದ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಸೇರಿದಂತೆ ಇತರ ಕಾಂಗ್ರೆಸ್ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಸ್ವಾಗತಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಕಾದು ಕಾದು ಬೆಂಡಾದ ಪತ್ರಕರ್ತರು
ರವಿವಾರ ಕಾರ್ಕಳ ಗಾಂಧಿ ಮೈದಾನದಲ್ಲಿ ಕಾರ್ಕಳ ಬ್ಲಾಕ್ ಮತ್ತು ಹೆಬ್ರಿ ಬ್ಲಾಕ್ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುಟುಂಬೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರ ಸ್ಥಿತಿ ಹೀನಾಯವಾಗಿತ್ತು.
ವಿಐಪಿಗಳ ಸಾಲಿನ ಬಲಬದಿಯಲ್ಲಿ ಪತ್ರಕರ್ತರಿಗಾಗಿಯೇ ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮವು ಉಪಮುಖ್ಯಮಂತ್ರಿಗಳ ಭಾಷಣ ಮುಗಿಯೋ ಹೊತ್ತಿಗೆ ಸಂಜೆ 5:30 ಕಳೆದಿತ್ತು. ಈ ಅವಧಿಯಲ್ಲಿ ಪತ್ರಕರ್ತರು ಸುಡು ಬಿಸಿಲಿನಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾದ ಪರಿಸ್ಥಿತಿ ನೆಲೆಸಿದೆ.
ಪತ್ರಕರ್ತರು ಹಾಗೂ ವಿಐಪಿ ಕುಳಿತುಕೊಂಡಿರುವ ಸ್ಥಳದಲ್ಲಿ ಪೆಂಡಾಲು ಹಾಕದಿರುವುದೇ ಇವೆಲ್ಲ ಆವಾಂತರಕ್ಕೆ ಕಾರಣವಾಗಿದೆ.
ಒಂದೆಡೆ ತಾಪಮಾನ ವಿಪರೀತವಾಗಿದ್ದು, ಈ ನಡುವೆ ರಾಜಕೀಯ ತಾಪಮಾನ ತೀವ್ರಗೊಂಡಿದ್ದರೆ, ಕಾರ್ಯಕರ್ತರಿಗೂ ಹಾಗೂ ವೇದಿಕೆಗೆ ಮಾತ್ರ ಪೆಂಡಾಲ್ ಅಳವಡಿಸಿ, ವಿಐಪಿ ಹಾಗೂ ಪತ್ರಕರ್ತರಿಗೆ ಪೆಂಡಾಲು ಅಳವಡಿಸದೆ ಇರುವುದೇ ವಿಪರ್ಯಾಸವಾಗಿದೆ.