# Tags
#PROBLEMS

  ನಡಿಕುದ್ರು ಪ್ರದೇಶ ರಕ್ಷಿಸಿ, ಬಂದರು ಕಾಮಗಾರಿ ಪೂರೈಸಲು ಕಾಪು ತಹಶಿಲ್ದಾರ್‌ಗೆ ಮನವಿ (Appeal to Kaup Tehsildar to protect Nadikudru area and complete port work)

  ನಡಿಕುದ್ರು ಪ್ರದೇಶ ರಕ್ಷಿಸಿ, ಬಂದರು ಕಾಮಗಾರಿ ಪೂರೈಸಲು ಕಾಪು ತಹಶಿಲ್ದಾರ್‌ಗೆ ಮನವಿ

(Hejamady) ಹೆಜಮಾಡಿ : ಕಾಪು ತಾಲೂಕಿನ ಹೆಜಮಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ 100 ಕೋಟಿಗೂ ಅಧಿಕ ವೆಚ್ಚದ ಹೆಜಮಾಡಿ ಬಂದರು ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, “ಪ್ರಕೃತಿದತ್ತವಾದ ಅಳಿವೆಯನ್ನು ಮುಚ್ಚಿದ್ದಾರೆ” ಎಂದು ನಡಿಕುದ್ರು ದ್ವೀಪ ವಾಸಿಗಳು   ಕಾಪು ತಹಶೀಲ್ದಾರ್‌ ಡಾ. ಪ್ರತಿಭಾರವರಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 ಈ ಪ್ರದೇಶ ನಡಿಕುದ್ರು ದ್ವೀಪದ ದಕ್ಷಿಣ ಭಾಗ ಶಾಂಭವಿ ಹಾಗೂ ನಂದಿನಿ  ನೀರು ಕಡಲಿಗೆ ಸೇರುವ ಪ್ರದೇಶವಾಗಿದ್ದು, ಈ ಹಿಂದೆ ಪ್ರಕೃತಿದತ್ತವಾದ ಅಳಿವೆಯಾಗಿತ್ತು. ನದಿ ನೀರು ಸರಾಗವಾಗಿ ಹರಿದು ಯಾವುದೇ ಸಮಸ್ಯೆಗಳು ಇರಲಿಲ್ಲ. ಇದೀಗ ಬಂದರು ಕಾಮಗಾರಿ ಪ್ರಾರಂಭವಾಗಿ ಪ್ರಕೃತಿದತ್ತವಾದ ಅಳಿವೆಯನ್ನು ಮುಚ್ಚಿ ಅಳಿವೆಯ ಹಿಂದಿನ ಉತ್ತರಭಾಗದಲ್ಲಿ ಅಳಿವೆ ನಿರ್ಮಿಸಿ, ಬ್ರೇಕ್ ವಾಟರ್ ನಿರ್ಮಾಣ ಕಾರ್ಯ ನಡೆದು ಉಳಿದ ಕಾಮಗಾರಿ ಸ್ಥಗಿತಗೊಂಡಿವೆ.

 2021  ರಲ್ಲಿ ತೌಖ್ತೆ ಚಂಡಮಾರುತದ ಪರಿಣಾಮ ಪ್ರಕ್ಷುಬ್ಧಗೊಂಡ ಸಮುದ್ರದ ನೀರು ಭಾರಿ ಪ್ರಮಾಣವಾಗಿ ಹೆಚ್ಚಳವಾಗಿ, ತೆರೆಗಳು ಅಪ್ಪಳಿಸಿ ಭಾರೀ ಮಳೆಯಿಂದಾಗಿ ಕೃಷಿ  ಭೂಮಿಗೆ ಸಮುದ್ರದ ಉಪ್ಪು ನೀರು ಪ್ರವೇಶಿಸಿತ್ತು. ಇದರಿಂದ ಬೆಳೆ ಹಾನಿಯೂ ಉಂಟಾಗಿತ್ತು. ಇದರಿಂದಾಗಿ ನಡಿಕುದ್ರು ಪ್ರದೇಶದ ಕೃಷಿಕರಿಗೆ ಕುಡಿಯುವ ನೀರು ಮತ್ತು ಭತ್ತದ ಬೆಳೆ ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮಾರು 60 ಎಕರೆಗೂ ಮಿಕ್ಕಿ ಅಧಿಕ ಕೃಷಿ ಭೂಮಿ ಹಾಗೂ  30 ಬಾವಿಗಳಿಗೆ ಹಾನಿ ಉಂಟಾಗಿತ್ತು.

 ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿತ್ತನೆಗಾಗಿ ಗೊಬ್ಬರ ಹಾಕಿ ಹದಗೊಳಿಸಿದ ಕೃಷಿ ಭೂಮಿ ಉಪ್ಪು ನೀರು ತುಂಬಿ ಬಿತ್ತನೆ ಮಾಡಲಾಗದೆ ಉಪ್ಪು ನೀರು ಇಂಗಿ ಭತ್ತ ಬೆಳೆಯುವುದೇ ಕಷ್ಟಕರವಾಗಿತ್ತು.

ತಡೆಗೋಡೆ ನಿರ್ಮಾಣವಾಗಬೇಕು

ಕೃತಕ ಅಳಿವೆಯ ಕಾಮಗಾರಿ ಪೂರ್ತಿಯಾಗದೆ ಶಾಂಭವಿ ನದಿಯ ನೀರು ಸರಾಗವಾಗಿ ಹರಿಯದೆ ನೆರೆ ಭೀತಿ ಉಂಟಾಗಿದೆ. ನದಿ ನೀರು ಉಕ್ಕೇರಿ ಬಂದು ಮನೆ, ತೋಟ ಜಲಾವೃತವಾಗುವ ಸಾಧ್ಯತೆ ಇರುವುದರಿಂದ ಉತ್ತಮ ವೈಜ್ಞಾನಿಕ ರಕ್ಷಣಾ ತಡೆಗೋಡೆಯ ನಿರ್ಮಾಣವಾಗಬೇಕು.

 ♦ ಡ್ರೆಡ್ಜಿಂಗ್ ಮಾಡಿದಾಗ ಉಪ್ಪು ನೀರು ಹರಿದು ಬಂದು ಬೆಳೆ ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗ್ರಾಮಸ್ಥರ ಬೇಡಿಕೆ ಸಲ್ಲಿಸಿದ್ದಾರೆ.

ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ರವರು ಬಂದರು ಕಾಮಗಾರಿಯ ಪ್ರದೇಶಕ್ಕೆ ಭೇಟಿ  ನೀಡಿ ಗ್ರಾಮಸ್ಥರ ಅಳಲು ಆಲಿಸಿದರು.

  ಈ ಸಂದರ್ಭ ಅವರು ಮಾತನಾಡಿ, “ಹೆಜಮಾಡಿ  ಕಡಲತಡಿಯಲ್ಲಿ ಮಹತ್ವಾಕಾಂಕ್ಷೆಯ ಬಂದರು ಕಾಮಗಾರಿ ಅತ್ಯುತ್ತಮವಾಗಿ ನಿರ್ಮಾಣಗೊಳ್ಳುತ್ತಿದೆ. ಆದರೆ ಅಲ್ಲಿಯ ನಡಿಕುದ್ರು ಸ್ಥಳೀಯ ನಿವಾಸಿಗಳು ಈ ಬಂದರು ಕಾಮಗಾರಿಯ   ಡ್ರೆಡ್ಜಿಂಗ್ ಸಮಯದಲ್ಲಿ ಉಪ್ಪು ನೀರು ಹರಿದು ಬೆಳೆ ಹಾಳಾಗುತ್ತಿರುವುದರ ಬಗ್ಗೆ ನಮಗೆ ಮನವಿ ನೀಡಿದ್ದಾರೆ. ಸುರಕ್ಷಿತ ತಡೆಗೋಡೆ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಷಯವನ್ನು ಬಂದರು ಇಲಾಖೆಯ ಗಮನಕ್ಕೆ ತರಲಾಗುವುದು. ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಕಾಯ್ದುಕೊಂಡು ಕಾಮಗಾರಿ ಮುಂದುವರಿಸಲು ಸೂಚನೆ ನೀಡಲಾಗುವುದು. ನಮಗೆ ಅಭಿವೃದ್ಧಿ ಯೋಜನೆಯೂ ಮುಖ್ಯ, ಸ್ಥಳೀಯರ ಹಿತವೂ ಮುಖ್ಯ” ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ

 ಈ ಸಂದರ್ಭದಲ್ಲಿ ರೆವಿನ್ಯೂ ಅಧಿಕಾರಿ ಇಜ್ಜಾರ್ ಸಾಬಿರ್,  ಗ್ರಾಮ ಲೆಕ್ಕಿಗ ಶ್ರೀಕಾಂತ್ ಹಾಜರಿದ್ದರು.

ಸ್ಥಳೀಯರಾದ ಸುಧೀರ್ ಕರ್ಕೇರ, ವಾಮನ ಪೂಜಾರಿ, ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

Emedia Advt3