# Tags
#ದೈವ - ದೇವರು

“ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಯುತ್ತದೆ!”-ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ಶಿಬರೂರು ಧಾರ್ಮಿಕ ಸಭೆ:

“ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಯುತ್ತದೆ!”
-ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ಶಿಬರೂರು ಧಾರ್ಮಿಕ ಸಭೆ:

ಸುರತ್ಕಲ್: “ಮಕ್ಕಳಿಗೆ ಎಳವೆಯಲ್ಲೇ ಧಾರ್ಮಿಕ ಸಂಸ್ಕಾರ ನೀಡಬೇಕು. ನಾವು ಧರ್ಮ ಮತ್ತದರ ಸಂಸ್ಕಾರವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ನಾವು ಮಾತ್ರ ಚೆನ್ನಾಗಿ ಬದುಕಿದರೆ ಸಾಲದು ನಮ್ಮ ಜೊತೆ ಇತರರು ಕೂಡ ಬದುಕಬೇಕು. ದುರ್ಬಲರನ್ನು ಬಲಿ ಕೊಟ್ಟು ಬದುಕುವುದು ಬೇಡ ಬದಲಿಗೆ ಅವರನ್ನೂ ಜೊತೆಗೆ ಕೊಂಡೊಯ್ಯುವ ಮೂಲಕ ಬದುಕನ್ನು ಚೆಂದಗಾಣಿಸಿಕೊಳ್ಳಬೇಕು” ಎಂದು ಮಧ್ವಾಚಾರ್ಯ ಮಹಾಸಂಸ್ಥಾನ ಕುಕ್ಕೆ ಇದರ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಾಗಮಂಡಲದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಬಳಿಕ ಮಾತಾಡಿದ ಧಾರ್ಮಿಕ ವಿದ್ವಾಂಸ ವಿದ್ವಾನ್ ಪಂಜ ಭಾಸ್ಕರ ಭಟ್ ಅವರು, “ಶಿಬರೂರು ಕ್ಷೇತ್ರದ ಪವಿತ್ರ ಮಣ್ಣಿಗೆ ವಿಷವನ್ನು ಶರೀರದಿಂದ ತೆಗೆಯುವ ಶಕ್ತಿಯಿದೆ. ಹಿಂದಿನ ಕಾಲದಲ್ಲಿ ವಿಷ ಜಂತು ಕಡಿದರೆ ಇಲ್ಲಿನ ಮಣ್ಣನ್ನು ಪವಿತ್ರ ಗಂಧವೆಂದು ಕೈಮುಗಿದು ದೇಹಕ್ಕೆ ಮತ್ತು ಬಾಯಿಗೆ ಹಾಕಿ ಸ್ವಾಮಿ ಕೊಡಮಣಿತ್ತಾಯ ಎಂದರೆ ವಿಷದ ಪ್ರಭಾವ ಇಳಿದು ಪ್ರಾಣಕ್ಕೆ ಹಾನಿಯಾಗುವುದು ತಪ್ಪುತ್ತಿತ್ತು. ಇದು ಇಲ್ಲಿನ ದೈವದ ಕಾರಣಿಕ. ಇಂದಿಗೂ ಶಿಬರೂರಿನ ಮಣ್ಣು ವಿಷನಾಶಕ ಎಂದೇ ಕರೆಯಲ್ಪಡುತ್ತಿದೆ. ಉಳ್ಳಾಯ ದೈವ ಮತ್ತು ಕೊಡಮಣಿತ್ತಾಯ ದೈವ ಜನರ ರಕ್ಷಣೆ ಮಾಡುತ್ತಾ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಇಲ್ಲಿನ ತೀರ್ಥವನ್ನು ಇಂದಿಗೂ ಮರಾಯಿಯಲ್ಲಿ ತೆಗೆದು ಭಕ್ತರಿಗೆ ಹಂಚಲಾಗುತ್ತಿದೆ. ಇಂತಹ ಪವಿತ್ರ ಸನ್ನಿಧಾನದಲ್ಲಿ ನಡೆಯಲಿರುವ ನಾಗಮಂಡಲ ಸಹಿತ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಲಿ” ಎಂದರು.

ಅಧ್ಯಕ್ಷತೆ ವಹಿಸಿ ಮಾತಾಡಿದ ಶ್ರೀ ಕ್ಷೇತ್ರ ಕೊಡಮಣಿತ್ತಾಯ ಮೂಲಕ್ಷೇತ್ರ, ಪಡ್ಯಾರಬೆಟ್ಟು ಇದರ ಮೊಕ್ತೇಸರ ಜೀವಂಧರ್ ಕುಮಾರ್ ಯಾನೆ ಕಂಚಿಪೂವಣಿಯವರು, “ಕೊಡಮಣಿತ್ತಾಯ ನೆಲೆಸಿರುವ ನಮ್ಮ ಮೂಲ ಕ್ಷೇತ್ರವು ದೈವದ ಅನುಗ್ರಹದಿಂದ ಬೆಳಗಿದೆ. ತಿಬಾರ್ ಕ್ಷೇತ್ರದ ಕಾರಣಿಕ, ಬೆಳೆದು ಬಂದ ರೀತಿಯನ್ನು ಗಮನಿಸಿದಾಗ ಆತ್ಮ ತುಂಬಿಬಂದಿದೆ. ಈ ಕ್ಷೇತ್ರ ಇನ್ನಷ್ಟು ಬೆಳಗಲಿ. ಮಾಧ್ಯಮಗಳು ಇಂದು ಬಹಳಷ್ಟು ಬೆಳೆದಿದೆ. ದೈವ ಎಲ್ಲಿಂದ ಬಂತು ಎಲ್ಲಿಗೆ ಹೋಯಿತು ಎಂದೆಲ್ಲ ಮನಸಿಗೆ ತೋಚಿದಂತೆ ಬರೆಯುವ ಬದಲು ವಿಮರ್ಶೆ ಮಾಡಿ ಬರೆಯಬೇಕು” ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೋಂಜಾಲುಗುತ್ತು, ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಂ. ಮಧುಕರ ಅಮೀನ್, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಅಜಿತ್ ಕಿಟ್ಟಣ್ಣ ಶೆಟ್ಟಿ ಕೋಂಜಾಲುಗುತ್ತು, ಭಾರತ್ ಬ್ಯಾಂಕ್ ಮುಂಬೈ ಇದರ ಆಡಳಿತ ನಿರ್ದೇಶಕ ಸೂರ್ಯಕಾಂತ್ ಜಿ ಸುವರ್ಣ, ಕಿರಣ್, ಪ್ರವೀಣ್ ಶೆಟ್ಟಿ ಸೂರತ್, ಚಂದ್ರಶೇಖರ ಪೂಜಾರಿ, ಶ್ರೀಧರ್ ಎಸ್. ಪೂಜಾರಿ, ದಯಾನಂದ ಶೆಟ್ಟಿ, ಪಂಜ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಯಾದವ ಕೃಷ್ಣ ಶೆಟ್ಟಿ, ಗಂಗಾಧರ್ ಪೂಜಾರಿ, ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

ಸುನೀತಾ ಶೆಟ್ಟಿ ಪಡುಮನೆ ಪ್ರಾರ್ಥಿಸಿದರು. ವಿನೀತ್ ಶೆಟ್ಟಿ ಸ್ವಾಗತಿಸಿ ಜಯಲಕ್ಷ್ಮಿ ಸುರೇಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Leave a comment

Your email address will not be published. Required fields are marked *

Emedia Advt5 Emedia Advt3 Emedia Advt1 Emedia Advt2